ಮೂಡಿಗೆರೆ : ಸರ್ಕಾರಿ ಆಸ್ಪತ್ರೆಯ ವೈದ್ಯರ ಮೇಲಿನ ಹಲ್ಲೆ ಅಕ್ಷಮ್ಯ ಅಪರಾಧ : ಮಾಜಿ ಸಚಿವ ಬಿ.ಬಿ.ನಿಂಗಯ್ಯ.

406
firstsuddi

ಮೂಡಿಗೆರೆ: ಬುಧವಾರದಂದು ಮೂಡಿಗೆರೆಯ ಎಂ.ಜಿ.ಎಂ ಸರ್ಕಾರಿ ಆಸ್ಪತ್ರೆಯ ವೈದ್ಯರ ಮೇಲಿನ ಹಲ್ಲೆ ಅನಾಗರಿಕವಾಗಿದ್ದು, ಅಕ್ಷಮ್ಯ ಅಪರಾಧ. ಇಂಥಹ ಘಟನೆಗಳಿಗೆ ಸಾರ್ವಜನಿಕರು ಆಸ್ಪದ ನೀಡದೆ ಶಾಂತ ಚಿತ್ತರಾಗಿ ನಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಅವರು ಹೇಳಿದರು.

ಇಂದು ಮೂಡಿಗೆರೆಯ ಎಂ.ಜಿ.ಎಂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯ ಸಂತೋಷ್ ಅವರ ಮೇಲಿನ ಹಲ್ಲೆ ವಿಚಾರ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಗೆ ಹಲವಾರು ದಶಕಗಳ ಇತಿಹಾಸವಿದೆ. ಅತ್ಯುತ್ತಮ ವೈದ್ಯರುಗಳು ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಲಕ್ಷಾಂತರ ರೋಗಿಗಳು ಇಲ್ಲಿ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿ ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಆದರೆ ಬುಧವಾರದಂದು ವೈದ್ಯ ಸಂತೋಷ್ ಅರಸ್ ಅವರ ಮೇಲಿನ ಹಲ್ಲೆ ಪ್ರಕರಣ ನಮ್ಮ ಊರಿನ ಹೆಸರು ಹಾಳು ಮಾಡುವಂತಿದೆ. ಇನ್ನು ಮುಂದೆ ಇಂಥಹ ಪ್ರಕರಣಗಳು ನಡೆಯದ ರೀತಿಯಲ್ಲಿ ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದರು.
ಪ್ರಸ್ತುತ ತಾಲ್ಲೂಕು ಆಸ್ಪತ್ರೆಯಲ್ಲಿ 14 ಜನ ವೈದ್ಯರು ಕಾರ್ಯ ನಿರ್ವಹಿಸಬೇಕು. ವೈದ್ಯರುಗಳ ಕೊರತೆಯಿಂದಾಗಿ ಕೇವಲ 7 ಜನ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಫಿಜಿಷಿಯನ್ ಹಾಗೂ ಫಿಸಿಯೋಥೆರಪಿಸ್ಟ್ ಕೊರತೆ ಸಹ ಇದೆ. ಕೋರೋನಾ ಸೋಂಕು ಬಂದ ನಂತರದಲ್ಲಿ ವೈದ್ಯರುಗಳಿಗೆ ಆಸ್ಪತ್ರೆಯ ಜೊತೆಗೆ ಹೊರಗಿನ ಕೆಲಸದ ಒತ್ತಡ ಜಾಸ್ತಿಯಾಗಿದೆ. ಕನಿಷ್ಟ ರಜೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಾಗದ ರೀತಿಯಲ್ಲಿ ಕೆಲಸದ ಒತ್ತಡವಿರುತ್ತದೆ. ಇಂಥಹ ಮನಸ್ಥಿತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವುದು ಸವಾಲಿನ ವಿಚಾರ. ಇಂಥಹ ಸಂದರ್ಭದಲ್ಲಿ ಸೌಜನ್ಯದಿಂದ ಸೇವೆ ನೀಡುತ್ತಿರುವ ವೈದ್ಯರುಗಳ ಮೇಲೆ ಹಲ್ಲೆ, ಜಗಳ ಮುಂತಾದ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದರು. ಈ ಸಂದರ್ಭದಲ್ಲಿ ವೈದ್ಯ ಸಂತೋಷ್ ಅರಸ್, ಡಾ. ಸುನೀಲ್, ಮುಖ್ಯ ವೈದ್ಯಾಧಿಕಾರಿ ಡಾ.ಸುಂದ್ರೇಶ್ ಇದ್ದರು.