ಮೂಡಿಗೆರೆ : ಹ್ಯಾಂಡ್ ಬ್ರೇಕ್ ಮಿಸ್ಟೇಕ್… ! ವ್ಯಕ್ತಿಯ ಸಮಯ ಪ್ರಜ್ಞೆಯಿಂದ ಕಾರಿನಲ್ಲಿದ್ದ ಇಬ್ಬರು ಬಚಾವ್…

296

ಮೂಡಿಗೆರೆ: ಹಾಲು ತರಲೆಂದು ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ್ದಾಗ ಕಾರು ಇದ್ದಕ್ಕಿದ್ದಂತೆ ಚಲಿಸಿದ್ದು, ಕೆಲಕಾಲ ಸುತ್ತಮುತ್ತಲು ಇದ್ದ ಜನರಲ್ಲಿ ಆತಂಕ ಉಂಟು ಮಾಡಿತ್ತು. ಆದರೆ ಕಾರಿನ ಹಿಂಬದಿಯಲ್ಲಿ ಬೈಕ್ ಮೇಲೆ ಕುಳಿತು ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿಯ ಸಮಯಪ್ರಜ್ಞೆಯಿಂದಾಗಿ ಸಂಭವಿಸಲಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ವ್ಯಕ್ತಿಯೋರ್ವರು ಪಟ್ಟಣದ ಅಡ್ಯಂತಾಯ ರಂಗಮಂದಿರಕ್ಕೆ ಹೊಂದಿಕೊಂಡಂತೆ ಇರುವ ಅರಣ್ಯ ಇಲಾಖೆ ಪಕ್ಕದ ರಸ್ತೆಯಲ್ಲಿರುವ ನಂದಿನಿ ಹಾಲಿನ ಡೈರಿಯಲ್ಲಿ ಹಾಲು ತರಲು ಕಾರು ನಿಲ್ಲಿಸಿ ಹಾಲು ತರಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಹ್ಯಾಂಡ್‍ಬ್ರೇಕ್ ಹಾಕಿ ಕಾರು ನಿಲ್ಲಿಸದೆ ಇರುವುದು ಈ ಘಟನೆಗೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಡ್ರೈವರ್ ಪಕ್ಕದ ಸೀಟಿನಿಂದ ಮಹಿಳೆಯೊಬ್ಬರು ಕಾರಿನಿಂದ ಇಳಿದ ಕೂಡಲೇ ಕಾರು ಮುಂದಕ್ಕೆ ಚಲಿಸಿದ್ದು, ಬೈಕಿನ ಮೇಲೆ ಕಾರಿನ ಹಿಂಬದಿಯಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಸ್ಥಳೀಯ ನಾಗರಾಜ್ ಪೂಜಾರಿ ಎಂಬುವವರು ಕೂಡಲೇ ಎಚ್ಚೆತ್ತುಕೊಂಡು ಕಾರಿನ ಹ್ಯಾಂಡ್‍ಬ್ರೇಕ್ ಹಾಕಿ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ಕಾರಿನ ಹಿಂಬದಿಯಲ್ಲಿ ಇಬ್ಬರು ಕುಳಿತಿದ್ದರು. ಅಲ್ಲದೆ ಕಾರು ನಿಲ್ಲಿಸಿದ್ದ ರಸ್ತೆ ಇಳಿಜಾರು ಪ್ರದೇಶವಾಗಿದ್ದು, ಬೇಲೂರು ಮುಖ್ಯ ರಸ್ತೆಗೆ ಸೇರ್ಪಡೆಯಾಗುತ್ತಿತ್ತು. ಒಂದುವೇಳೆ ಕಾರು ನಿಯಂತ್ರಣಕ್ಕೆ ಸಿಗದೆ ಇದ್ದಿದ್ದರೆ ಕಾರಿನ ಒಳಗಿದ್ದ ಪ್ರಯಾಣಿಕರ ಜೊತೆಗೆ ಪಾದಾಚಾರಿ ಅಥವಾ ವಾಹನಗಳಿಗೆ ತಗುಲಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಘಟನೆ ಶುಕ್ರವಾರ ಮಧ್ಯಾಹ್ನದ ವೇಳೆ ಸಂಭವಿಸಿದ್ದು, ಶುಕ್ರವಾರ ಸಂತೆಯ ದಿನವಾಗಿದ್ದರಿಂದ ಪಾದಾಚಾರಿಗಳು ಹಾಗೂ ವಾಹನಗಳ ಓಡಾಟ ಹೆಚ್ಚಿತ್ತು. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಘಟನೆಯ ವೀಡಿಯೋ ನಂದಿನಿ ಡೈರಿಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಭಾರೀ ಚರ್ಚೆಯ ಜೊತೆಗೆ ಯಾವುದೇ ವಾಹನಗಳನ್ನು ನಿಲ್ಲಿಸುವಾಗ ಹ್ಯಾಂಡ್ ಬ್ರೇಕ್ ಜೊತೆಗೆ ಮೊದಲ ಗೇರ್‍ನಲ್ಲಿ ನಿಲ್ಲಿಸಬೇಕು ಎನ್ನುವ ಹಲವಾರು ಕಾಮೆಂಟ್‍ಗಳಿಗೆ ಕಾರಣವಾಯಿತು. ಅಲ್ಲದೆ ಯುವಕನ ಸಮಯ ಸ್ಪೂರ್ಥಿಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು.