ಮೂವರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ…

44
firstsuddi

ಬೆಳಗಾವಿ: ಮಹಿಳೆಯೊಬ್ಬರು ತನ್ನ ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಜನತಾ ಪ್ಲ್ಯಾಟ್ ನಿವಾಸಿ 40 ವರ್ಷದ ಸರಸ್ವತಿ ಎಂಬುವರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲೇ ತನ್ನ ಮೂವರು ಹೆಣ್ಣುಮಕ್ಕಳಾದ 14 ವರ್ಷದ ಸೃಷ್ಟಿ, 8 ವರ್ಷದ ಸಾಕ್ಷಿ ಮತ್ತು 3 ವರ್ಷದ ಸಾನ್ವಿಗೆ ಫಿನಾಯಿಲ್ ಕುಡಿಸಿ ನಂತರ ತಾನೂ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಪತಿ ಅದೃಶ್ಯಪ್ಪ ಹಂಪಣ್ಣವರ ಜೊತೆಗೆ ಬೆಳಗಾವಿಯ ಅನಗೋಳದ ಬಾಡಿಗೆ ಮನೆಯಲ್ಲಿ ಸರಸ್ವತಿ ವಾಸವಿದ್ದರು. ಅನಗೋಳದ ಸಲೂನ್ ಶಾಪ್ ನಲ್ಲಿ ಅದೃಶ್ಯಪ್ಪ ಹಂಪಣ್ಣವರ ಕೆಲಸ ಮಾಡುತ್ತಿದ್ದರು. ಕೈತುಂಬ ಸಾಲ ಮಾಡಿ 15 ದಿನಗಳ ಹಿಂದೆಯೇ ಪತ್ನಿ ಹಾಗೂ ತನ್ನ ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ಅದೃಶ್ಯಪ್ಪ ಹೋಗಿದ್ದರು. ತುತ್ತು ಅನ್ನಕ್ಕೂ ಗತಿಯಿಲ್ಲದೇ ಸರಸ್ವತಿ ತನ್ನ ಮಕ್ಕಳ ಜೊತೆಗೆ ಜಿಲ್ಲಾಧಿಕಾರಿ ಭೇಟಿಗಾಗಿ ಡಿಸಿ ಕಚೇರಿಗೆ ಆಗಮಿಸಿದ್ದರು.

ಈ ವೇಳೆ ಮಹಿಳೆಯನ್ನು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳು ವಿಚಾರಿಸಿದ್ದಾರೆ. ಆಗ ಜ್ಯೂಸ್ ಎಂದು ನನ್ನ ತಾಯಿ ಏನೋ ಕುಡಿಸಿದ್ದಾಳೆಂದು ಸಿಬ್ಬಂದಿ ಎದುರು ಹಿರಿಯ ಪುತ್ರಿ ಸೃಷ್ಟಿ ಹೇಳಿದ್ದಾಳೆ. ಬಳಿಕ ಸರಸ್ವತಿ ಹಾಗೂ ಮೂವರು ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ತಕ್ಷಣ ಎಚ್ಚೆತ್ತ ಡಿಸಿ ಕಚೇರಿ ಸಿಬ್ಬಂದಿಗಳು ಪೊಲೀಸರ ನೆರವು ಪಡೆದು ಜಿಲ್ಲಾಸ್ಪತ್ರೆಗೆ ಅಸ್ವಸ್ಥರನ್ನು ದಾಖಲಿಸಿದ್ದಾರೆ.

ಸದ್ಯ ಸರಸ್ವತಿ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.