ಮೊರಾದಾಬಾದ್​ನಲ್ಲಿ ಹೇಯ ಕೃತ್ಯ.. ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ಬಚಾವಾಗಲು ವಿವಸ್ತ್ರವಾಗಿ ಓಡಿದ ಬಾಲಕಿ!

65
firstsuddi

ಮೊರಾದಾಬಾದ್: 15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದು, ಆಕೆ ಅವರಿಂದ ತಪ್ಪಿಸಿಕೊಂಡು ರಸ್ತೆಯ ಮೇಲೆ ವಿವಸ್ತ್ರಳಾಗಿ ಓಡಿಕೊಂಡು ಹೋಗುತ್ತಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ 20 ದಿನಗಳ ಹಿಂದೆ ನಡೆದಿದೆ ಎಂದು ಹೇಳಲಾಗಿದೆ.

ಏನಿದು ಘಟನೆ?: ಸೆಪ್ಟೆಂಬರ್ 1 ರಂದು ಜಾತ್ರೆ ಮುಗಿಸಿಕೊಂಡು ಬರುತ್ತಿದ್ದ 15 ವರ್ಷದ ಬಾಲಕಿಯನ್ನು ಐವರು ಯುವಕರು ಅಪಹರಿಸಿಕೊಂಡು ಪಕ್ಕದ ಅರಣ್ಯಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಾಲಕಿ ಕಿರುಚಾಡುತ್ತಿರುವುದನ್ನು ಕೇಳಿದ ದಾರಿಹೋಕರು ಅಲ್ಲಿಗೆ ಹೋದಾಗ ಕೀಚಕರು ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.

ಬಳಿಕ ನಗ್ನವಾಗಿದ್ದ ಬಾಲಕಿಯನ್ನು ಅಲ್ಲಿದ್ದವರು ಹಾಗೆಯೇ ಮನೆಗೆ ಹೋಗಲು ಹೇಳಿದ್ದಾರಂತೆ. ಬಾಲಕಿ ಅಸಹಾಯಕಳಾಗಿ ನಗ್ನ ಸ್ಥಿತಿಯಲ್ಲಿಯೇ ರಸ್ತೆಯಲ್ಲಿ ನಡೆದುಕೊಂಡು ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಗೆ ತಲುಪಿದ್ದಾಳೆ.

ಸಂತ್ರಸ್ತೆ ಮನೆಗೆ ಹಿಂತಿರುಗಿದಾಗ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದಳು. ಈ ವಿಚಾರವನ್ನು ನಮಗೆ ತಿಳಿಸಿದಳು. ನಂತರ ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದ್ದೆವು. ಆದರೆ, ಈ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಟಿಯಾಲ್ ಅವರ ಮುಂದೆ ಪ್ರಸ್ತಾಪಿಸುವವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಕೆಯ ಚಿಕ್ಕಪ್ಪ ಆರೋಪಿಸಿದ್ದಾರೆ.

ಇದಾದ ಬಳಿಕ ಸೆಪ್ಟೆಂಬರ್ 7 ರಂದು ಪೊಲೀಸರು ಎಫ್ ಐಆರ್ ದಾಖಲಿಸಿದರು. ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಕುಟುಂಬ ಸದಸ್ಯರು ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಎಫ್ ಐಆರ್ ನಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಮೀನಾ ಮಾತನಾಡಿ, ಐಪಿಸಿ ಸೆಕ್ಷನ್ 376 ಡಿ (ಗ್ಯಾಂಗ್ ರೇಪ್) ಮತ್ತು ಪೊಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ಪೈಕಿ ಒಬ್ಬನನ್ನು ಸೆಪ್ಟೆಂಬರ್ 15 ರಂದು ಬಂಧಿಸಿದ್ದೇವೆ. ಸದ್ಯ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.