ದಾವಣಗೆರೆ : ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿಯಲ್ಲಿ ಕರಿಬಸವೇಶ್ವರನ ದರ್ಶನ ಬಳಿಕ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ಯತ್ನಾಳ್ ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಅವರ ಟೀಕೆಗಳಿಗೆಲ್ಲಾ ಉತ್ತರ ಕೊಡೋಕೆ ಆಗೋಲ್ಲ. ಹದಿನೇಳು ಜನಕ್ಕೆ ಮಾತ್ರವಲ್ಲ ಎಲ್ಲರಿಗೂ ಸಿಎಂ ಅನುದಾನ ಕೊಟ್ಟಿದ್ದಾರೆ ಎಂದು ಸಚಿವ ಬಿ .ಸಿ ಪಾಟೀಲ್ ಅವರು ಯತ್ನಾಳ್ ವಿರುದ್ಧ ಕಿಡಿ ಕಾರಿದ್ದಾರೆ.
ಈ ಹದಿನೇಳು ಜನರು ಬರದಿದ್ದರೆ ಇವತ್ತು ಬಿಜೆಪಿ ಸರ್ಕಾರ ಬರುತ್ತಿರಲಿಲ್ಲ ಎಂಬುದನ್ನು ಯತ್ನಾಳ್ ಅವರು ಅರ್ಥ ಮಾಡಿಕೊಳ್ಳಲಿ. ಇವರ ಲೆಟರ್ ಹೆಡ್ ಗಳೆಲ್ಲಾ ಧೂಳು ತಿನ್ನುತ್ತಿದ್ದವು. ಸರ್ಕಾರ ಬಂದಿರೋದಕ್ಕೆ ಅವರು ಇಷ್ಟೆಲ್ಲ ಮಾತಾಡ್ತಿದ್ದಾರೆ. ಅದು ಸರಿಯಲ್ಲ ಟೀಕೆ, ಟಿಪ್ಪಣಿ ಯಾವಾಗಲೋ ಒಂದು ಬಾರಿಯಾದರೆ ಒಳ್ಳೆಯದು. ಯಡಿಯೂರಪ್ಪನವರ ಹೋರಾಟದಿಂದ ಬಿಜೆಪಿ ಸರ್ಕಾರ ಬಂದಿದೆ. ಸರ್ಕಾರ ರಚನೆ ವೇಳೆ ಯಡಿಯೂರಪ್ಪ ಬಿಟ್ಟರೆ ಇವರ್ಯಾರೂ ಬಂದಿರಲಿಲ್ಲ. ಯಡಿಯೂರಪ್ಪ ಅವರನ್ನ ನಂಬಿ ಹದಿನೇಳು ಜನರು ಬಂದಿದ್ದೇವೆ. ಅದಕ್ಕೆ ಬಿಜೆಪಿ ಸರಕಾರ ಸುಭದ್ರವಾಗಿದೆ. ಸುಮ್ಮನೆ ನಾಲಿಗೆ ಇದೆ ಅಂತಾ ಏನೇನೋ ಮಾತನಾಡಿದರೆ ಒಳ್ಳೆಯದಲ್ಲ. ಹದಿನೇಳು ಜನರ ತ್ಯಾಗದಿಂದ ಬಿಜೆಪಿ ಸರ್ಕಾರ ಬಂದಿದೆ ಎಂಬುವುದನ್ನು ಯತ್ನಾಳ್ ಅವರು ಅರಿತುಕೊಳ್ಳಲಿ ಎಂದರು.










