ಚಂಡೀಗಢ : ಕೋವಿಡ್-19 ಪ್ರೋಟೋಕಾಲ್ ಅನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ರಾಷ್ಟ್ರೀಯ ಹಿತಾಸಕ್ತಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಮುಂದೂಡಿ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಗೆ ಪತ್ರ ಬರೆದಿದ್ದರು. ಈ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಕೇಂದ್ರ ಸರ್ಕಾರಕ್ಕೆ ಕೊರೊನಾ ಒಂದು ನೆಪ ಎಂದು ವಾಗ್ದಾಳಿ ನಡೆಸಿದ್ದಾರೆ.
ಹರಿಯಾಣದ ನುಹ್ ಜಿಲ್ಲೆಯ ಘಸೆರಾ ಗ್ರಾಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆಯು ಕಾಶ್ಮೀರಕ್ಕೆ ಹೋಗುತ್ತದೆ. ಇದೀಗ ಕೇಂದ್ರ ಸರ್ಕಾರ ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಹೊಸ ಆಲೋಚನೆ ಮಾಡಿದೆ. ಕೋವಿಡ್ ಹರಡುತ್ತಿದೆ ಯಾತ್ರೆಯನ್ನು ನಿಲ್ಲಿಸಿ ಎಂದು ನನಗೆ ಪತ್ರ ಬರೆದಿದ್ದಾರೆ. ಯಾತ್ರೆಯನ್ನು ತಡೆಯಲು ನೆಪಗಳನ್ನು ಹುಡುಕುತ್ತಿದ್ದರು. ಇದೀಗ ಕೊರೊನಾ ಒಂದು ನೆಪವಾಗಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಕೋವಿಡ್ ಹರಡುತ್ತಿದೆ, ಮಾಸ್ಕ್ ಧರಿಸಿ ಎಂದು ಹೇಳುತ್ತಿದೆ. ಇದೆಲ್ಲವೂ ಯಾತ್ರೆ ನಿಲ್ಲಿಸಲು ನೆಪಗಳಷ್ಟೇ. ಭಾರತ್ ಜೋಡೋ ಯಾತ್ರೆಯಲ್ಲಿ ಜಾತಿ, ಧರ್ಮ ಮರೆತು ಹಿರಿಯರು, ಕಿರಿಯರು ಪ್ರತಿಯೊಬ್ಬರು ಭಾಗವಹಿಸುತ್ತಿದ್ದಾರೆ ಇದರಿಂದ ಬಿಜೆಪಿಗೆ ಭಯ ಶುರುವಾಗಿದೆ ಎಂದರು.










