ಬೆಂಗಳೂರು: ಕರ್ನಾಟಕದಲ್ಲಿನ ಬಡತನ ರೇಖೆಗಿಂತ ಮೇಲಿರುವವರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಎಂಬ ಚರ್ಚೆ ನಡುವೆಯೇ ಯಾವುದೇ ಕಾರ್ಡ್ ಗಳನ್ನು ರದ್ದು ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಸಚಿವ ಕೆ.ಹೆಚ್.ಮುನಿಯಪ್ಪ ಅನರ್ಹ ಅಭ್ಯರ್ಥಿಗಳನ್ನು ಎಪಿಎಲ್ ಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಪಡಿತರ ಚೀಟಿ ವಿಚಾರವನ್ನು ಸಮ್ಮನೇ ರಾಜಕೀಯಗೊಳಿಸಲಾಗುತ್ತಿದೆ. ಸರ್ಕಾರ ಯಾವುದೇ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲ. ಅನರ್ಹ ಬಿಪಿಎಲ್ ಕಾರ್ಡುದಾರರನ್ನು ರದ್ದು ಮಾಡಿಲ್ಲ ಬದಲಾಗಿ ಎಪಿಎಲ್ ವರ್ಗಕ್ಕೆ ವರ್ಗಾಯಿಸಲಾಗಿದೆ ಎಂದು ಹೇಳಿದ್ದಾರೆ.
ಜನಸಂಖ್ಯೆಯ ಸುಮಾರು 80 ಪ್ರತಿಶತ ಜನರು ಬಿಪಿಎಲ್ ಕಾರ್ಡ್‍ಗಳನ್ನು ಹೊಂದಿದ್ದಾರೆ. ಆದಾಗ್ಯೂ, ಕೆಲವು ಅನರ್ಹ ವ್ಯಕ್ತಿಗಳು ಬಿಪಿಎಲ್ ಕಾರ್ಡ್‍ಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಬಂದಿದೆ. ನಾವು ಅಂತಹ ಕಾರ್ಡ್‍ಗಳನ್ನು ಮರುವರ್ಗೀಕರಿಸುವ ಕೆಲಸ ಮಾಡುತ್ತಿದ್ದೇವೆ. ಅವುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಿಲ್ಲ, ಆದರೆ ಅವುಗಳನ್ನು ಎಪಿಎಲ್ ವರ್ಗಕ್ಕೆ ವರ್ಗಾಯಿಸುತ್ತೇವೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.










