ನವದೆಹಲಿ : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಹಾಗೂ ಎರಡನೇ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮೊದಲ ಹೆಸರು ಯೋಗಿ ಆದಿತ್ಯನಾಥ್ ಅವರದ್ದು, ಅವರು ಗೋರಖ್ ಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಮೊದಲು ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈಗ ಆ ಎಲ್ಲ ವದಂತಿಗಳಿಗೆ ತೆರೆ ಎಳೆಯಲಾಗಿದೆ.
ಮೊದಲ ಹಂತಕ್ಕೆ 57 ಅಭ್ಯರ್ಥಿಗಳು ಮತ್ತು ಎರಡನೇ ಹಂತಕ್ಕೆ 48 ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಫೆ.10ರಿಂದ ಮಾ.7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾ.10ರಂದು ಫಲಿತಾಂಶ ಹೊರಬೀಳಲಿದೆ.
ಇತ್ತ ಯೋಗಿ ಆದಿತ್ಯನಾಥ್ ಗೋರಖ್ ಪುರ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತಗೊಳ್ಳುತ್ತಿದ್ದಂತೆ ಅಖಿಲೇಶ್ ಯಾದವ್, ಯೋಗಿ ಆದಿತ್ಯನಾಥ್ ಅವರನ್ನ ಗೋರಖ್ ಪುರ್ ಕ್ಕೆ ಕಳುಹಿಸಲು ಬಿಜೆಪಿ ಈಗಾಗಲೇ ನಿರ್ಧರಿಸಿರುವುದು ನನಗೆ ಇಷ್ಟವಾಗಿದೆ. ಯೋಗಿ ಅಲ್ಲಿಯೇ ಉಳಿಯಬೇಕು. ಅಲ್ಲಿಂದ ವಾಪಸ್ ಬರುವ ಅಗತ್ಯವಿಲ್ಲ ಎಂದಿದ್ದಾರೆ.