ಕ್ಷೇತ್ರದ ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ : ಇರ್ಫಾನ್ ಅನ್ಸಾರಿ ವಿವಾದಿತ ಹೇಳಿಕೆ…

67
firstsuddi

ರಾಂಚಿ : ಕ್ಷೇತ್ರದ ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ ಎಂದು ಜಾರ್ಖಂಡ್ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ವಿವಾದಿತ ಹೇಳಿಕೆಯನ್ನು ನೀಡಿ ವಿವಾದಕ್ಕೆ ಸಿಲುಕಿದ್ದಾರೆ.

ತನ್ನ ಕ್ಷೇತ್ರದ ರಸ್ತೆಯ ಅಭಿವೃದ್ಧಿ ಬಗ್ಗೆ ಜನರಿಗೆ ಆಶ್ವಾಸನೆ ನೀಡುವಾಗ ಶಾಸಕ ಅನ್ಸಾರಿ ಕ್ಷೇತ್ರದ ರಸ್ತೆಗಳನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಕೆನ್ನೆಗಿಂತ ಸುಗಮವಾಗಿಸುತ್ತೇನೆ. ಅಂತಹ ರಸ್ತೆಗಳಲ್ಲಿ ಬುಡಕಟ್ಟು ಸಮುದಾಯದ ಮಕ್ಕಳು ಹಾಗೂ ರಾಜ್ಯದ ಯುವಕರು ಓಡಾಡಬಹುದು. ಅಂತಹ ಹದಿನಾಲ್ಕು ರಸ್ತೆಗಳ ನಿರ್ಮಾಣ ಸದ್ಯದಲ್ಲೇ ಆರಂಭವಾಗಲಿದೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಶಿವಸೇನೆ ನಾಯಕ, ಮಹಾರಾಷ್ಟ್ರ ಸಚಿವ ಗುಲಾಬ್ ರಾವ್ ಪಾಟೀಲ್ ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗಳಿಗೆ ಹೋಲಿಸಿದ್ದರು. ನಂತರ ಈ ಹೇಳಿಕೆ ವಿವಾದ ಪಡೆದುಕೊಳ್ಳುತ್ತಿದ್ದಂತೆ ಕ್ಷಮೆ ಕೋರಿದ್ದರು. ಅದೇ ರೀತಿ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ತಮ್ಮ ಕ್ಷೇತ್ರದ ರಸ್ತೆಗಳನ್ನು ಕತ್ರಿನಾ ಕೈಫ್ ಕೆನ್ನೆಯಂತೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದು ಕೂಡ ಇತ್ತೀಚೆಗೆ ವಿವಾದ ಸೃಷ್ಟಿಸಿತ್ತು. ನಂತರ ಅವರೂ ಕೂಡ ಕ್ಷಮೆ ಕೋರಿದ್ದರು.