ಯುಪಿ ಸಿಎಂ ಹೈಕೋರ್ಟ್‍ನ ನ್ಯಾಯಾಧೀಶರೇ? : ಓವೈಸಿ ಪ್ರಶ್ನೆ…

57
firstsuddi

ಗಾಂಧಿನಗರ : ಪ್ರಯಾಗ್ ರಾಜ್ ಹಿಂಸಾಚಾರದ ಪ್ರಮುಖ ಆರೋಪಿಯ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದರು. ಗುಜರಾತ್ ನ ಕಚ್ ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಯುಪಿ ಸಿಎಂ ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಅವರು ಯಾರನ್ನಾದರೂ ಅಪರಾಧಿ ಎಂದು ಘೋಷಿಸುತ್ತಾರೆ. ಅವರ ಮನೆಗಳನ್ನು ಕೆಡವುತ್ತಾರೆ ಎಂದು ಕಿಡಿಕಾರಿದರು.

ಪ್ರಯಾಗ್ ರಾಜ್ ನಲ್ಲಿ ಜೂನ್ 10 ರಂದು ನಡೆದ ಹಿಂಸಾಚಾರದ ಸಂಚುಕೋರ ಜಾವೇದ್ ಮೊಹಮ್ಮದ್ ಅಲಿಯಾಸ್ ಪಂಪ್ ಅವರ ಮನೆಯನ್ನು ಭಾರೀ ಪೊಲೀಸ್ ನಿಯೋಜನೆಯ ನಡುವೆ ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರ (ಪಿಡಿಎ) ನಿನ್ನೆ ನೆಲಸಮಗೊಳಿಸಿದೆ.

ಆರೋಪಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಮತ್ತು ಕಾರ್ಯಕರ್ತೆ ಅಫ್ರೀನ್ ಫಾತಿಮಾ ಅವರ ತಂದೆ. ಕಳೆದ ವರ್ಷ ಕೇಂದ್ರದ ವಿವಾದಾತ್ಮಕ ಪೌರತ್ವ ಕಾನೂನಿನ ವಿರುದ್ಧದ ಪ್ರತಿಭಟನೆಯಲ್ಲಿ ಫಾತಿಮಾ ಭಾಗವಾಗಿದ್ದರು. ಪ್ರಯಾಗ್ ರಾಜ್ ಹಿಂಸಾಚಾರದಲ್ಲಿ ಆಕೆಯ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಧ್ವಂಸಕ್ಕೂ ಮುನ್ನ ಭಾನುವಾರ ಬೆಳಗ್ಗೆ ಅವರ ಮನೆಯಲ್ಲಿ ಶೋಧ ನಡೆಸಲಾಗಿತ್ತು. 12 ಬೋರ್ ಅಕ್ರಮ ಪಿಸ್ತೂಲ್ ಮತ್ತು 315 ಬೋರ್ ಪಿಸ್ತೂಲ್ ಮತ್ತು ನ್ಯಾಯಾಲಯದ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್ಗಳನ್ನು ತೋರಿಸುವ ಕೆಲವು ದಾಖಲೆಗಳನ್ನು ಪತ್ತೆಹಚ್ಚಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಯಾಗ್ರಾಜ್ ಅಜಯ್ ಕುಮಾರ್ ಹೇಳಿದ್ದಾರೆ.

ಪ್ರಯಾಗ್ ರಾಜ್ ಪ್ರಾಧಿಕಾರವು ಅಹ್ಮದ್ ಅವರ ಮನೆ ಕೆಡುವುದಕ್ಕೆ ಸಂಬಂಧಿಸಿದ ನೋಟಿಸ್ ಅಂಟಿಸಿತ್ತು. ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಜೂನ್ 12 ರಂದು(ನಿನ್ನೆ) ಬೆಳಿಗ್ಗೆ 11 ಗಂಟೆಯೊಳಗೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು.