ಯುವಕನ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ಬಂಧನಕ್ಕೆ ಬಿಎಸ್‍ಪಿ ಒತ್ತಾಯ…

98
firstsuddi

ಚಿಕ್ಕಮಗಳೂರು: ಚುನಾವಣಾ ದ್ವೇಷದ ಹಿನ್ನೆಲೆಯಲ್ಲಿ ಇಲ್ಲಿನ ಕಲ್ಯಾಣನಗರದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬಹುಜನ ಸಮಾಜ ಪಕ್ಷ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದೆ.

ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕಚೇರಿಯ ಸಹಾಯವಾಣಿ ವಿಭಾಗದ ಮುಖ್ಯಸ್ಥ ಪರಮೇಶ್ ಅವರನ್ನು ಇಂದು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ಪಕ್ಷದ ಪದಾಧಿಕಾರಿಗಳು ಹಲ್ಲೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಲ್ಯಾಣ ನಗರದ ಯುವಕ ಅರುಣ ಎಂಬುವರ ಮೇಲೆ ಚುನಾವಣಾ ದ್ವೇಷದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಹಲ್ಲೆಯಿಂದಾಗಿ ಯುವಕ ತೀವ್ರವಾಗಿ ಗಾಯಗೊಂಡಿದ್ದು, ಕೃತ್ಯದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ವ್ಯಾಪಿ ಹರಿದಾಡುತ್ತಿದೆ ಎಂದು ತಿಳಿಸಿದರು.

ಹಲ್ಲೆ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣದ ಕುರಿತು ತನಿಖೆ ನಡೆಸಿ ಹಲ್ಲೆಯ ಹಿಂದಿರುವ ಕಾಣದ ಕೈಗಳ ಹೆಸರನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜಿಲ್ಲಾ ಉಸ್ತುವಾರಿ ಕೆ.ಎಂ.ಗೋಪಾಲ್, ಅಸೆಂಬ್ಲಿ ಸಂಯೋಜಕಿ ಕೆ.ಎಸ್.ಮಂಜುಳಾ, ಪ್ರಧಾನ ಕಾರ್ಯದರ್ಶಿ ವಸಂತ, ಗಿರೀಶ್, ಹೊನ್ನಪ್ಪ, ಶೀಲಾ ಹಾಜರಿದ್ದರು.