ಜನಪ್ರಿಯ ಟಿವಿ ಶೋ ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಪಾತ್ರದ ಮೂಲಕ ಖ್ಯಾತಿ ಪಡೆದ ನಟಿ ವೈಭವಿ ಉಪಾಧ್ಯಾಯ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ಭಾವಿ ಪತಿಯೊಂದಿಗೆ ಹಿಮಾಚಲ ಪ್ರದೇಶದ ಪ್ರವಾಸದಲ್ಲಿದ್ದ ಖ್ಯಾತ ಕಿರುತೆರೆ ನಟಿ ವೈಭವಿ ಉಪಾಧ್ಯಾಯ ನಿಧನರಾಗಿದ್ದಾರೆ. ಪ್ರವಾಸ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದ ಪರಿಣಾಮ ಅವರು ಕೊನೆಯುಸಿರೆಳೆದಿದ್ದಾರೆ. 32 ವಯಸ್ಸಿನ ವೈಭವಿ ಕಿರುತೆರೆ ಫೇಮಸ್ ನಟಿ. ಅಲ್ಲದೇ, ಇತ್ತೀಚೆಗೆ ಅವರು ಸಿನಿಮಾಗಳಲ್ಲೂ ನಟಿಸುತ್ತಿದ್ದರು.
ಹಿಂದಿ ಕಿರುತೆರೆಯಲ್ಲಿ ಜಾಸ್ಮೀನ್ ಎಂದೇ ಪರಿಚಿತರು. ಇದು ಅವರ ಪಾತ್ರದ ಹೆಸರಾಗಿತ್ತು. ‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ನಿರ್ಮಾಪಕ ಈ ಸುದ್ದಿಯನ್ನು ಖಚಿತ ಪಡಿಸುತ್ತಿದ್ದಂತೆಯೇ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ನಿನ್ನೆ ಈ ಘಟನೆ ಸಂಭವಿಸಿದ್ದು, ನಂತರ ಅವರ ಮೃತದೇಹವನ್ನು ಮುಂಬೈಗೆ ತರಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಇದೆ. ವೈಭವಿ ನಿಧನಕ್ಕೆ ಹಿಂದಿ ಕಿರುತೆರೆ ಅನೇಕರು ಸಂತಾಪ ಸೂಚಿಸಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಅವರು ದೀಪಿಕಾ ಪಡುಕೋಣೆ ನಟನೆ ಛಪಾಕ್ ಹಾಗೂ ತಿಮಿರ್ ಎನ್ನುವ ಚಿತ್ರದಲ್ಲೂ ನಟಿಸಿದ್ದರು.










