ಕೊರೋನಾ ಭೀತಿ-ರಾಜ್ಯದಲ್ಲಿ ಇನ್ನೂ 2ವಾರ ಲಾಕ್‍ಡೌನ್ ಅನಿವಾರ್ಯ – ಬಿ.ಎಸ್ ಯಡಿಯೂರಪ್ಪ.

208
firstsuddi

ಬೆಂಗಳೂರು: ಕರೋನಾ ವೈರಸ್ ತಡೆಗಟ್ಟಲು ಲಾಕ್ ಡೌನ್ ಅನಿವಾರ್ಯ ಆಗಿರುವುದರಿಂದ ಮುಂದಿನ 15 ದಿನಗಳ ಕಾಲ ಅದನ್ನು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿಡೀಯೊ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಸುಮಾರು 4 ಗಂಟೆಗಳ ಕಾಲ ಎಲ್ಲಾ ರಾಜ್ಯಗಳ ಸಿಎಂಗಳಿಂದ ರಾಜ್ಯಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ದೇಶದಲ್ಲಿ ಕೊವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮತ್ತು ಸಮುದಾಯಕ್ಕೆ ಹರಡುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನು ಎರಡು ವಾರಗಳ ಕಾಲ ಲಾಕ್ ಡೌನ್ ಅನಿವಾರ್ಯವಾಗಿದೆ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಸಡಿಲ ಆಗಬಾರದು ಎಂದು ಪ್ರಧಾನಿಗಳು ಸೂಚಿಸಿರುವುದಾಗಿ ತಿಳಿಸಿದರು. ಮುಂದಿನ ಎರಡು ವಾರಗಳ ಲಾಕ್ ಡೌನ್ ವಿಭಿನ್ನವಾಗಿರಲಿದ್ದು, ಈ ಕುರಿತು ಕೇಂದ್ರ ಸರ್ಕಾರ ಇನ್ನು ಎರಡ್ಮೂರು ದಿನದಲ್ಲಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಏಪ್ರಿಲ್ 10ರಿಂದ ಮೀನುಗಾರಿಕೆ, ಮೀನು ಸಂಸ್ಕರಣಕ್ಕೆ ಲಾಕ್ ಡೌನ್ ನಿಂದ ವಿನಾಯ್ತಿ ನೀಡಲಾಗಿದೆ ಎಂದು ಪ್ರಧಾನಿಗಳು ತಿಳಿಸಿದ್ದು, ಇದರಿಂದ ಕರಾವಳಿಯಲ್ಲಿ ಮೀನುಗಾರಿಕೆಗೆ ಸಹಕಾರಿಯಾಗಲಿದೆ ಎಂದರು.