ಚಿಕ್ಕಮಗಳೂರು : ಕೊರೊನಾ ಲಾಕ್‍ಡೌನ್-ನಕಲಿ ಕರ್ಫ್ಯೂ ಪಾಸ್ ಮಾರುತ್ತಿದ್ದ ಅಪ್ರಾಪ್ತ ಪೊಲೀಸರ ವಶಕ್ಕೆ…

658

ಚಿಕ್ಕಮಗಳೂರು : ಮಹಾಮಾರಿ ಕೊರೋನ ಆತಂಕದಿಂದ ಇಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆ ಜನಸಾಮಾನ್ಯ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಆಸ್ಪತ್ರೆ, ಪೋಸ್ಟ್ ಆಫೀಸ್, ಬ್ಯಾಂಕ್, ತರಕಾರಿ ವಾಹನಗಳು ಸೇರಿದಂತೆ ಕೆಲವು ವ್ಯಕ್ತಿ ಹಾಗೂ ವಾಹನಗಳಿಗೆ ಪಾಸ್ ವ್ಯವಸ್ಥೆ ಕಲ್ಪಿಸಿದೆ. ಆದರೆ, ಜಿಲ್ಲೆಯಲ್ಲಿ ಸರ್ಕಾರದ ಪಾಸನ್ನೇ ನಕಲಿ ಮಾಡಿ ಬೀದಿ-ಬೀದಿಯಲ್ಲಿ ಸೊಪ್ಪು ತರಕಾರಿ ಮಾರಿದಂತೆ ಅಪ್ರಾಪ್ತನೊಬ್ಬ ಮಾರಿದ್ದಾನೆ. ಅಪ್ರಾಪ್ತನ ಈ ಕೆಲಸಕ್ಕೆ ಆತನ ತಾಯಿಯ ಬೆಂಬಲವೂ ಇದೆ ಎಂದು ಹೇಳಲಾಗ್ತಿದೆ. ಈಗಾಗಲೇ ನೂರಾರು ಪಾಸ್ ಗಳನ್ನು ಮಾರಿರುವ ಅಪ್ರಾಪ್ತನನ್ನು ಇದೀಗ ನಗರ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಪಾಸ್ ಖರೀದಿಸಿದ್ದ ಮತ್ತೋರ್ವ ಗ್ರಾಹಕನನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಕಲಿ ಪಾಸ್ ಮಾಡಿ ಮನಸ್ಸೋ ಇಚ್ಛೆ ಮಾರಾಟ ಮಾಡಿರುವ ಈತ ಒಬ್ಬೊಬ್ಬರಿಂದ ಒಂದೊಂದು ಪಾಸ್ ಗೆ 500 ರಿಂದ 1000 ರೂಪಾಯಿವರೆಗೂ ಹಣ ಪೀಕಿದ್ದಾನೆ. ಇದೀಗ, ನಕಲಿ ಪಾಸ್ ಮಾರಿದವನು, ಪಡೆದವನು ಇಬ್ಬರನ್ನೂ ನಗರ ಪೊಲೀಸರು ಬಂಧಿಸಿದ್ದಾರೆ.