ಬೆಂಗಳೂರು : ಕೊರೊನಾ ಮತ್ತು ಓಮಿಕ್ರಾನ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ನಾಳೆ ಸಂಜೆ ತಜ್ಞರ ಸಮಿತಿ ಜೊತೆ ಸಭೆ ನಡೆಸಲಿದ್ದು, ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಕೊರೊನಾ ಮತ್ತು ಓಮಿಕ್ರಾನ್ ಎರಡನ್ನೂ ಕೂಡ ನಾವು ಗಮನಿಸುತ್ತಿದ್ದೇವೆ. ಹೀಗಾಗಿ ತಜ್ಞರ ಸಮಿತಿ ಜೊತೆ ಒಂದು ಸಭೆ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾಳೆ ಸಂಜೆ ತಜ್ಞರ ಸಮಿತಿ ಜೊತೆ ನಡೆಸಿ, ಒಟ್ಟಾರೆ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ದೀರ್ಘಾವಧಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಎರಡು ಬಾರಿ ನಮಗೆ ಕೊರೊನಾ ಅನುಭವವಾಗಿದೆ. ಹಾಗಾಗಿ ಜನತೆ ಈಗ ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು, ಕೋವಿಡ್ ಮಾರ್ಗಸೂಚಿ ಕುರಿತ ಆದೇಶಗಳನ್ನು ಸ್ವಯಂ ಪಾಲನೆ ಮಾಡಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಆರೋಗ್ಯದ ಸುರಕ್ಷತೆ ಬಗ್ಗೆ ಗಮನ ಕೊಡುವ ಕೆಲಸವನ್ನು ಜನತೆ ಮಾಡಬೇಕು ಎಂದು ಸಿಎಂ ತಿಳಿಸಿದರು.
ಇಂದಿನಿಂದ 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ರಾಜ್ಯಾದ್ಯಂತ ಚಾಲನೆ ನೀಡಲಾಗುತ್ತಿದೆ, ವ್ಯಾಪಕವಾದ ಅಭಿಯಾನವನ್ನು ಮಾಡುತ್ತೇವೆ. ಇದಕ್ಕೆ ಪೋಷಕರು, ಮಕ್ಕಳು, ಶಿಕ್ಷಕರು ಎಲ್ಲರೂ ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.










