ಮುಂಬೈ: ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಇರುವ ದೂರನ್ನು ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
2022ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ದೂರನ್ನು ರದ್ದುಗೊಳಿಸಬೇಕು ಎಂದು ಮಮತಾ ಬ್ಯಾನರ್ಜಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ಸೆಷನ್ಸ್ ನ್ಯಾಯಾಲಯವು ಸಮನ್ಸ್ ಅನ್ನು ರದ್ದುಗೊಳಿಸುವ ಮತ್ತು ಪ್ರಕರಣವನ್ನು ರವಾನಿಸುವ ಬದಲು ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ದೂರನ್ನು ರದ್ದುಗೊಳಿಸಬೇಕು ಎಂದು ಹೇಳಿದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರ ಏಕ ಸದಸ್ಯ ಪೀಠವು, ಸೆಷನ್ಸ್ ನ್ಯಾಯಾಲಯದ ಆದೇಶದಲ್ಲಿ ಕಾನೂನಿಗೆ ವಿರುದ್ಧವಾದ ಕ್ರಮವಿದೆ. ಆದ್ದರಿಂದ, ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಮುಂಬೈನ ಕಫ್ ಪರೇಡ್ ನಲ್ಲಿರುವ ಯಶವಂತರಾವ್ ಚವಾಣ್ ಸಭಾಂಗಣದಲ್ಲಿನ ಸಾರ್ವಜನಿಕ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ಅವರು ಕುಳಿತೇ ರಾಷ್ಟ್ರಗೀತೆ ಹಾಡಲು ಪ್ರಾರಂಭಿಸಿದರು ಮತ್ತು ನಂತರ ಎದ್ದು ನಿಂತರು. ಅಲ್ಲದೆ, ಎರಡು ಸಾಲುಗಳನ್ನು ಹಾಡಿ, ಮಧ್ಯೆಯೇ ಅಲ್ಲಿಂದ ನಿರ್ಗಮಿಸಿದರು ಎಂದು ಆರೋಪಿಸಿ ವಿವೇಕಾನಂದ ಗುಪ್ತಾ ಎಂಬುವವರು ಸಲ್ಲಿಸಿದ್ದ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2022ರ ಮಾರ್ಚ್‌ನಲ್ಲಿ ಬ್ಯಾನರ್ಜಿಗೆ ಸಮನ್ಸ್ ಜಾರಿ ಮಾಡಿತು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ವಿಶೇಷ ನ್ಯಾಯಾಲಯದ ಮುಂದೆ ಸಮನ್ಸ್ ಅನ್ನು ಪ್ರಶ್ನಿಸಿದ್ದರು. ಜನವರಿಯಲ್ಲಿ, ವಿಶೇಷ ನ್ಯಾಯಾಧೀಶ ಆರ್.ಎನ್. ರೋಕಡೆ ಅವರು, ಕಾರ್ಯವಿಧಾನದ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ನೀಡಿದ್ದ ಸಮನ್ಸ್ ಅನ್ನು ರದ್ದುಗೊಳಿಸಿದರು ಮತ್ತು ದೂರನ್ನು ಹೊಸದಾಗಿ ಪರಿಗಣಿಸಲು ಮ್ಯಾಜಿಸ್ಟ್ರೇಟ್ ಗೆ ತಿಳಿಸಿದರು.
ಬಳಿಕ ಹೈಕೋರ್ಟ್ ಮೊರೆ ಹೋದ ಬ್ಯಾನರ್ಜಿ, ಈ ಆದೇಶವನ್ನು ಪ್ರಶ್ನಿಸಿ ಸಮನ್ಸ್ ಅನ್ನು ಹೊಸದಾಗಿ ಪರಿಗಣಿಸಲು ಮ್ಯಾಜಿಸ್ಟ್ರೇಟ್ ಗೆ ನಿರ್ದೇಶಿಸುವ ಬದಲು ಸಂಪೂರ್ಣ ಅದನ್ನು ರದ್ದುಗೊಳಿಸಬೇಕು ಎಂದು ಪ್ರತಿಪಾದಿಸಿದರು.










