ಲಖಿಂಪುರ ಖೇರಿ ಹಿಂಸಾಚಾರ : ಮೃತ ರೈತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಪ್ರಿಯಾಂಕ , ರಾಹುಲ್.

80
firstsuddi

ಲಕ್ನೋ : ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನೀಡಿ ನಿನ್ನೆ ಸಾಂತ್ವನ ಹೇಳಿದ್ದಾರೆ.

ಮೊದಲಿಗೆ ಇಬ್ಬರು ಪಾಲಿಯಾಗೆ ತಲುಪಿ ಲವ್​ಪ್ರಿತ್ ಸಿಂಗ್ ಕುಟುಂಬವನ್ನು ಭೇಟಿ ಮಾಡಿದರು. ಈ ವೇಳೆ ಪ್ರಿಯಾಂಕಾ ಹಾಗೂ ರಾಹುಲ್, ಲವ್ಪ್ರೀತ್ ಸಿಂಗ್ ಅವರ ಕುಟುಂಬದವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ. ಇನ್ನೂ ಈ ಫೋಟೋವನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಂತರ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಘಟನೆಯಲ್ಲಿ ಮೃತಪಟ್ಟ ಪತ್ರಕರ್ತರಾದ ರಾಮನ್ ಕಶ್ಯಪ್ ಅವರ ನಿಘಾಸನ್ ಅವರ ತಹಸಿಲ್ನಲ್ಲಿರುವ ಮನೆಗೆ ಭೇಟಿ ನೀಡಿದರು. ಕೊನೆಗೆ ಧೌರಾಹಾ ತಹಸಿಲ್ನಲ್ಲಿರುವ ನಚತಾರ್ ಸಿಂಗ್ ಅವರ ಮನೆಗೆ ತಲುಪಿದರು.

ಲಖಿಂಪುರ ಭೇಟಿಗೆ ಪ್ರತಿಪಕ್ಷ ಹಾಗೂ ಕಾಂಗ್ರೆಸ್ ನಾಯಕರಿಗೆ ಉತ್ತರ ಪ್ರದೇಶ ಸರ್ಕಾರ ಅವಕಾಶ ನೀಡಿದ ನಂತರ ಕಾಂಗ್ರೆಸ್ ನಿಯೋಗ ತೆರಳಿತ್ತು. ಇದಕ್ಕೂ ಮುನ್ನ ಪ್ರಿಯಾಂಕಾ ಗಾಂಧಿ ಅವರನ್ನು ಸೀತಾಪುರದ ಪಿಎಸಿ ಅತಿಥಿ ಗೃಹದಿಂದ ಬಿಡುಗಡೆ ಮಾಡಲಾಗಿತ್ತು.

ಭಾನುವಾರ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಹಿಂಸಾಚಾರ ಕೃತ್ಯ ನಡೆದಿದ್ದು, 8 ಜನ ಮೃತಪಟ್ಟಿದ್ದರು.