ವಂಚನೆ ಪ್ರಕರಣ ; ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್, ದೀಪಕ್‌ಗೆ ಜಾಮೀನು…

42
firstsuddi

ಮುಂಬೈ : ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಸಿಐಸಿಐ ಬ್ಯಾಂಕ್ ನ ಮಾಜಿ ಸಿಇಒ ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ಪಿ.ಕೆ. ಚವಾಣ್ ಅವರ ವಿಭಾಗೀಯ ಪೀಠವು ಇಂದು ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕೊಚ್ಚರ್ ದಂಪತಿಯನ್ನು ಬಂಧಿಸಿರುವುದು ಕಾನೂನು ಸಮ್ಮತವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?: 2012 ರಲ್ಲಿ ಐಸಿಐಸಿಐ ಬ್ಯಾಂಕ್‍ನಿಂದ ವಿಡಿಯೋಕಾನ್ ಗ್ರೂಪ್ 3,250 ಕೋಟಿ ರೂಪಾಯಿ ಸಾಲ ಪಡೆದು, ಕೆಲ ತಿಂಗಳ ನಂತರ ವಿಡಿಯೋಕಾನ್ ಪ್ರವರ್ತಕ ವೇಣುಗೋಪಾಲ್ ಧೂತ್ ಅವರು ನ್ಯೂಪವರ್ ಕಂಪನಿಯಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಾಲಗಳನ್ನು ನಂತರ ಅನುತ್ಪಾದಕ ಆಸ್ತಿ (ಎನ್ ಪಿಎ) ಎಂದು ಘೋಷಿಸಲಾಗಿತ್ತು. ಇದರಿಂದ ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಚಂದಾ ಕೊಚ್ಚರ್, ಅವರ ಪತಿ ಮತ್ತು ವಿಡಿಯೋಕಾನ್ ಗ್ರೂಪ್ನ ವೇಣುಗೋಪಾಲ್ ಧೂತ್, ನ್ಯೂಪವರ್ ರಿನ್ಯೂವಬಲ್ಸ್, ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚರ್ ಅವರನ್ನು ಈ ಹಿಂದೆ 2021ರಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. 2018ರಲ್ಲಿ ತನಿಖೆ ಆರಂಭವಾಗಿದ್ದು, ಆ ಸಂದರ್ಭದಲ್ಲಿ ಚಂದಾ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. 2019ರಲ್ಲಿ ಚಂದಾ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು.