ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ಶಿಕ್ಷಕ ಅಮಾನತು…

63
firstsuddi

ತುಮಕೂರು : ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಜಿಲ್ಲೆಯ ಶಾಲೆಯೊಂದರ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.

ಬೋರನಕುಂಟೆ ಸರ್ಕಾರಿ ಶಾಲೆ ಶಿಕ್ಷಕ ಮಂಜುನಾಥನನ್ನು ಅಮಾನತು ಮಾಡಲಾಗಿದೆ. ಇನ್ನು ಕರ್ತವ್ಯಲೋಪ ಆರೋಪದ ಮೇಲೆ ಮುಖ್ಯ ಶಿಕ್ಷಕ ನಟರಾಜ್ ನನ್ನು ಅಮಾನತು ಮಾಡಿ ಮಧುಗಿರಿ ಬಿಇಒ ತಿಮ್ಮರಾಜು ಆದೇಶ ಹೊರಡಿಸಿದ್ದಾರೆ.

ಮಂಜುನಾಥ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಗ್ರಾಮಸ್ಥರು ಶಾಲೆಗೆ ನುಗ್ಗಿ ಮಂಜುನಾಥನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

ಮಂಜುನಾಥನ ಕಾಮಚೇಷ್ಟೆ ವಿಷಯ ತಿಳಿದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು ಹಾಗೂ ಬುಡವನಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಹನುಮಂತರಾಯಪ್ಪ, ಸಿಡಿಪಿಒ ಅನಿತಾ ಅವರು ವಿದ್ಯಾರ್ಥಿನಿಯರ ವಿಚಾರಣೆ ನಡೆಸಿದ್ದರು.

ಇದೀಗ ಬಿಇಒ, ಶಿಕ್ಷಕ ಮಂಜುನಾಥನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಕರ್ತವ್ಯಲೋಪ ಮೇಲೆ ಮುಖ್ಯ ಶಿಕ್ಷಕ ನಟರಾಜ್ ಅವರನ್ನು ಸಹ ಸಸ್ಪೆಂಡ್ ಮಾಡಿದ್ದಾರೆ. ಸದ್ಯ ಶಿಕ್ಷಕ ಮಂಜುನಾಥ ಬಡವನಹಳ್ಳಿ ಪೊಲೀಸರ ವಶದಲ್ಲಿದ್ದಾರೆ.