ಚಿಕ್ಕಮಗಳೂರು: ವಿಶ್ವಕರ್ಮ ಸಮುದಾಯದ 20 ಕ್ಕೂ ಹೆಚ್ಚು ಮುಖಂಡರು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ವಿಶ್ವಕರ್ಮ ರಾಜಕೀಯ ಸಾಮಾಜಿಕ ಕ್ರಿಯಾ ಸಮಿತಿಯ ರಾಜ್ಯ ಸಂಚಾಲಕ ಜಗದೀಶಾಚಾರ್ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಸಮುದಾಯದ ಮುಖಂಡರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಜಗದೀಶಾಚಾರ್, ನೈತಿಕತೆ, ತತ್ವ, ಸಿದ್ಧಾಂತ ಮತ್ತು ಬದ್ಧತೆಗಳು ರಾಜಕೀಯ ಪಕ್ಷಗಳಲ್ಲಿ ಉಳಿದಿದ್ದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದರು.
ಆಡಳಿತ ಪಕ್ಷದ ದುರಾಡಳಿತ ಭ್ರಷ್ಟಾಚಾರ ಬಡವರ ವಿರೋಧಿ ನೀತಿಯಿಂದ ಬೇಸತ್ತು ಬದಲಾವಣೆಗಾಗಿ ಕಾಂಗ್ರೆಸ್ ಸೇರಿರುವುದಾಗಿ ತಿಳಿಸಿದರು.
ರಾಜ್ಯ ಅರ್ಚಕರ ಸಂಘದ ನಿರ್ದೇಶಕ ರತ್ನಾಕರಾಚಾರ್ ಮಾತನಾಡಿ, ಹಲವಾರು ವರ್ಷಗಳಿಂದ ವಿಶ್ವಕರ್ಮ ಸಮುದಾಯ ಬಿಜೆಪಿಯೊಂದಿಗಿದ್ದರೂ ಆ ಪಕ್ಷ ತಮ್ಮ ಸಮುದಾಯವನ್ನು ಗುರುತಿಸಲಿಲ್ಲ. ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸ್ಥಾಪನೆ ಮಾಡಿತು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಬಿ.ಎಲ್.ಶಂಕರ್, ಎ.ಎನ್.ಮಹೇಶ್, ಎಂ.ಎನ್. ಮೂರ್ತಿ, ಮಂಜೇಗೌಡ, ಎಂ.ಸಿ.ಶಿವಾನಂದ ಸ್ವಾಮಿ, ಅಭ್ಯರ್ಥಿ ಎಚ್.ಡಿ.ತಮ್ಮಯ್ಯ, ಪುಷ್ಪಲತಾ ಹಾಜರಿದ್ದರು.










