ಲಕ್ನೋ : ವಾರಾಣಸಿಯಲ್ಲಿ ಜಗತ್ತಿನ ಅತಿ ಉದ್ದನೆಯ ನದಿ ವಿಹಾರವಾದ ‘ಎಂವಿ ಗಂಗಾ ವಿಲಾಸ್’ ಕ್ರೂಸ್ ಹಡಗಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಇಂದು ಗಂಗಾ ವಿಲಾಸ್ ನದಿ ಪ್ರವಾಸಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಮೋದಿ, ಗಂಗಾ ನದಿಯಲ್ಲಿ ಕ್ರೂಸ್ ಸೇವೆ ಆರಂಭವಾಗುತ್ತಿರುವುದು ಐತಿಹಾಸಿಕ ಕ್ಷಣ. ಇದು ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಜೊತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ದೇಶದ ವಿವಿಧ ಭಾಗಗಳಲ್ಲೂ ಹೆಚ್ಚಿನ ನದಿ ವಿಹಾರ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಏನಿದು ಎಂವಿ ಗಂಗಾ ವಿಲಾಸ್?
ಇದೊಂದು ಐಷರಾಮಿ ಪ್ರವಾಸಿ ನೌಕೆ. ಪಂಚತಾರಾ ಹೋಟೆಲ್ ಮಾದರಿ ವ್ಯವಸ್ಥೆಯನ್ನು ನೌಕೆ ಹೊಂದಿದೆ. ನೌಕೆಯಲ್ಲಿ 3 ಅಂತಸ್ತುಗಳಿವೆ. ಈ ನೌಕೆಯು 62.5 ಮೀಟರ್ ಉದ್ದ ಮತ್ತು 12.8 ಮೀಟರ್ ಅಗಲ ಇದೆ. ಇದರಲ್ಲಿ 40 ಆಸನಗಳ ರೆಸ್ಟೋರೆಂಟ್, ಸ್ಪಾ ಕೊಠಡಿ ಕೂಡ ಇದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಒಟ್ಟು 18 ಸೂಟ್ ರೂಮ್ ಗಳನ್ನು ನೌಕೆ ಹೊಂದಿದೆ. ಐಷರಾಮಿ ಸೌಲಭ್ಯಗಳನ್ನು ಹೊಂದಿರುವ ಈ ನೌಕೆಯಲ್ಲಿ ಜಿಮ್ ಹಾಗೂ ಇತ್ಯಾದಿ ವ್ಯವಸ್ಥೆ ಇದೆ. ಒಮ್ಮೆಗೆ 32 ಪ್ರವಾಸಿಗರಿಗೆ ಅವಕಾಶ ಸಿಗಲಿದೆ.
ಎಂವಿ ಗಂಗಾ ವಿಲಾಸ್ 3,200 ಕಿಮೀ ಯಾನ ಮಾಡಲಿದೆ. ದೇಶದ ಮೊದಲ ಪ್ರವಾಸಿ ನೌಕೆ ಇದಾಗಿದ್ದು, ನದಿ ಮಾರ್ಗದ ಪ್ರವಾಸವನ್ನು ಆಸ್ವಾದಿಸಲು ವಿದೇಶಿ ಪ್ರವಾಸಗರು ಹೊರಟಿದ್ದಾರೆ. 36 ಸೀಟುಗಳ ಸಾಮರ್ಥ್ಯ ಹೊಂದಿರುವ ಈ ಕ್ರೂಸ್ ನಲ್ಲಿ ಸ್ವಿಡ್ಜರ್ ಲ್ಯಾಂಡ್ ನ 32 ಪ್ರವಾಸಿಗರು ಪ್ರವಾಸ ಬೆಳೆಸಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಿಂದ ಆರಂಭಗೊಂಡಿರುವ ಯಾತ್ರೆ 51 ದಿನಗಳ ಬಳಿಕ ಪೂರ್ವ ಅಸ್ಸಾಂನ ದಿಬ್ರೂಗಢಕ್ಕೆ ತಲುಪಲಿದೆ. ಈ ಕ್ರೂಸ್ನಲ್ಲಿ ಪ್ರತಿದಿನಕ್ಕೆ ಒಬ್ಬ ವ್ಯಕ್ತಿಗೆ 25 ರಿಂದ 50 ಸಾವಿರ ರೂ. ವೆಚ್ಚ ತಗುಲಲಿದೆ. ಒಟ್ಟಾರೆ 51 ದಿನಗಳ ಪ್ರವಾಸಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು 20 ಲಕ್ಷ ರೂ.ಗಳ ವೆಚ್ಚ ಭರಿಸಬೇಕಾಗುತ್ತದೆ.










