ವಿಶ್ವಸಂಸ್ಥೆ ಘೋಷಿತ ಉಗ್ರರಿಗೆ ಪಿಂಚಣಿ ನೀಡುತ್ತಿರುವ ಏಕೈಕ ರಾಷ್ಟ್ರ ಪಾಕಿಸ್ತಾನ, ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮಾನ ಹರಾಜು ಹಾಕಿದ ಭಾರತ…

799
firstsuddi

ನವದೆಹಲಿ : ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಪಾಕಿಸ್ತಾನದ ಮಾನವನ್ನು ಹರಾಜು ಹಾಕಿದ್ದು, ಬಿನ್ ಲಾಡೆನ್‍ಗೆ ಆಶ್ರಯ ನೀಡಿದ್ದು, ಹಾಗೂ ವಿಶ್ವಸಂಸ್ಥೆ ಘೋಷಿತ 130 ಉಗ್ರರನ್ನು ಪೋಷಿಸಿದ್ದು ಯಾರು? ಉಗ್ರರಿಗೆ ಪಿಂಚಣಿ ನೀಡುತ್ತಿದ್ದೇವೆ ಎಂದು ಪಾಕ್ ಒಪ್ಪಿಕೊಳ್ಳಲಿದೆಯೇ? ಎಂದು ಪ್ರಶ್ನಿಸುವ ಮೂಲಕ ವಿದೇಶಾಂಗ ಸಚಿವಾಲಯದ ಮೊದಲ ಕಾರ್ಯದರ್ಶಿ ವಿಧಿಶಾ ಮೈತ್ರಾ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ತಿರುಗೇಟು ನೀಡಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಅಣ್ವಸ್ತ್ರ ಸಹಿತ ರಾಷ್ಟ್ರಗಳ ನಡುವೆ ಯುದ್ದ ನಡೆದರೆ ಅದರ ಪರಿಣಾಮವನ್ನು ಇಡೀ ವಿಶ್ವವೇ ಅನುಭವಿಸಬೇಕು ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿಕ್ರಯಿಸಿದ ವಿಧಿಶಾ ಮೈತ್ರಾ ಅವರು, ಭಯೋತ್ಪಾದನೆಯನ್ನು ಪೋಷಿಸಿ ಬೆಳೆಸುತ್ತಿರುವ ರಾಷ್ಟ್ರದಿಂದ ಬಂದ ನಾಯಕರು ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡಿರುವುದು ಸರಿಯಲ್ಲ. ರಕ್ತದೋಕುಳಿ, ದಂಗೆ ಏಳುವಿಕೆಯಂತಹ ಹೇಳಿಕೆಗಳು ಪಾಕಿಸ್ತಾನದ ಪ್ರಧಾನಿಗೆ ಶೋಭಿಸುವುದಿಲ್ಲ. ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಇಲ್ಲ ಎಂಬುವುದನ್ನು ಖಚಿತಪಡಿಸಿಕೊಳ್ಳಲು ವಿಶ್ವಸಂಸ್ಥೆಯ ಪರಿಶೀಲಕರಿಗೆ ಇಮ್ರಾನ್ ಖಾನ್ ಅವರು ಒಪ್ಪಿಗೆ ನೀಡುತ್ತಾರೆಯೇ? ಅಲ್ಲದೇ ವಿಶ್ವಸಂಸ್ಥೆ ಘೋಷಣೆ ಮಾಡಿರುವ ಉಗ್ರರಿಗೆ ಪಿಂಚಣಿ ನಿಡುತ್ತಿರುವ ಬಗ್ಗೆ ಪಾಕ್ ಒಪ್ಪಿಕೊಳ್ಳಲು ಸಿದ್ದವಿದೆಯೇ? ವಿಶ್ವಸಂಸ್ಥೆ ಘೋಷಿತ ಉಗ್ರರಿಗೆ ಪಿಂಚಣಿ ನೀಡುತ್ತಿರುವ ಏಕೈಕ ರಾಷ್ಟ್ರ ಎಂದರೆ ಅದು ಪಾಕಿಸ್ತಾನ ಎಂದು ತಿರುಗೇಟು ನೀಡಿದರು.