ದಾವಣಗೆರೆ : ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಸಾಕಷ್ಟು ಕಸರತ್ತು ಮಾಡುತ್ತಿವೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದರೂ ಯಾವುದನ್ನೂ ಲೆಕ್ಕಿಸದೆ ಗಿಫ್ಟ್ ಪಾಲಿಟಿಕ್ಸ್ ಮುಂದುವರೆದಿದೆ. ಆದರೆ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ದಾವಣಗೆರೆಯ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿದ ಸೀರೆಗಳಿಗೆ ಮಹಿಳೆಯರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ದಾವಣಗೆರೆ ದಕ್ಷಿಣ ಹಾಗೂ ಉತ್ತರ ಕ್ಷೇತ್ರಗಳಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಭಾವಚಿತ್ರವಿರುವ ಬ್ಯಾಗ್ ನಲ್ಲಿ ಸೀರೆಗಳ ಹಂಚಿಕೆ ಮಾಡಲಾಗುತ್ತಿತ್ತು. ಆದ್ರೆ ಮಹಿಳೆಯರು ರಸ್ತೆಯಲ್ಲಿ ಸೀರೆ ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಮಹಿಳೆಯರು, ನಾವು ನಿಮ್ಮ 60 ರೂ. ಸೀರೆ ಉಟ್ಟುಕೊಳ್ಳುವಷ್ಟು ನಿರ್ಗತಿಕರಲ್ಲ. ಅಭಿವೃದ್ಧಿ ಮಾಡಿಲ್ಲ ಈಗ ಸೀರೆ ಹಂಚುತ್ತಿದ್ದಾರೆ ಎಂದು ಕಿಡಿಕಾರಿದರು.










