ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ದಾವಣಗೆರೆ ಉತ್ತರ ಕ್ಷೇತ್ರದ ಮಾಜಿ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ದ ಎಫ್‍ಐಆರ್ ದಾಖಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ಹೀಗಿದ್ದರೂ ಕೂಡ ಮತದಾರರಿಗೆ ಆಮಿಷವೊಡ್ಡಿ ಗಿಫ್ಟ್ ಹಂಚುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ಮಾಡಿದ್ದು, ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ದಾವಣಗೆರೆಯ ಕೆಟಿಜೆ ನಗರದ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ನಿನ್ನೆ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭಗತ್ ಸಿಂಗ್ ನಗರದಲ್ಲಿ ಮತದಾರರಿಗೆ ಹಂಚಲೆಂದು ಸಂಗ್ರಹಿಸಿದ್ದ 7.19 ಲಕ್ಷ ರೂಪಾಯಿ ಮೌಲ್ಯದ ಅಡುಗೆ ಸಲಕರಣೆಯನ್ನು ಪೊಲೀಸರು ಜಪ್ತಿ ಮಾಡಿದ್ದರು.
ಅಡುಗೆ ಸಲಕರಣೆಗಳ ಮೇಲೆ ಕಾಂಗ್ರೆಸ್ ಶಾಸಕ ಶಾಮನೂರ ಶಿವಶಂಕರಪ್ಪ ಹಾಗೂ ಪುತ್ರ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭಾವಚಿತ್ರವಿದ್ದ ಅಡುಗೆ ಸಲಕರಣೆಗಳು ಇದಾಗಿದ್ದು, ಬಳಿಕ ಕಾಡಜ್ಜಿ ಹನಮಂತಪ್ಪ ಎಂಬುವರ ವಿರುದ್ಧ ದೂರು ದಾಖಲು ಮಾಡಲಾಗಿತ್ತು. ಇದೀಗ ಇದೇ ಆರೋಪದ ಮೇಲೆ ಶಾಸಕ ಶಾಮನೂರು ಶಿವಶಂಕರಪ್ಪ, ಪುತ್ರ ಮಲ್ಲಿಕಾರ್ಜುನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.










