ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣ : ಪ್ರಮುಖ ಆರೋಪಿ ಕಾಲಿಗೆ ಗುಂಡೇಟು…

63
firstsuddi

ಶಿವಮೊಗ್ಗ : ನಗರದಲ್ಲಿ ಸಾವರ್ಕರ್ ಫೋಟೋ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನಿಗೆ ಚಾಕು ಇರಿತ ಪ್ರಕರಣದ ಪ್ರಮುಖ ಆರೋಪಿಯ ಕಾಲಿಗೆ ಇಂದು ಬೆಳಗಿನ ಜಾವ ಪೊಲೀಸರು ಗುಂಡು ಹಾರಿಸಿದ್ದಾರೆ.

ಗಾಂಧಿ ಬಜಾರ್ ನಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿಯಲಾಗಿತ್ತು. ಆ ಬಳಿಕ ಪ್ರಮುಖ ಆರೋಪಿ ಮೊಹಮ್ಮದ್ ಜಬೀ ಅಲಿಯಾಸ್ ಚರ್ಬಿ (30) ನಾಪತ್ತೆಯಾಗಿದ್ದರು. ಇಂದು ಬೆಳಿಗ್ಗೆ ತೀರ್ಥಹಳ್ಳಿ ರಸ್ತೆಯ ಫಲಕ್ ಸಮುದಾಯ ಭವನದ ಬಳಿ ಆರೋಪಿ ಇರುವ ಮಾಹಿತಿ ಮೇರೆಗೆ ಪೊಲೀಸರು ತೆರಳಿದ್ದರು.

ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ಜಬೀವುಲ್ಲಾ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಜಬೀವುಲ್ಲಾ ಕಾಲಿಗೆ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಕುರಿ ಫೈರ್ ಮಾಡಿದ್ದಾರೆ. ಗುಂಡೇಟು ತಿಂದ ಜಬೀವುಲ್ಲಾನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಆರೋಪಿ ಜಬೀವುಲ್ಲಾ ನನ್ನು ಮೆಗ್ಗಾನ್ ಜೈಲ್ ವಾರ್ಡ್ ಗೆ ಪೊಲೀಸರು ಶಿಫ್ಟ್ ಮಾಡಿದ್ದಾರೆ.

ಚಾಕು ಇರಿತ ಪ್ರಕರಣ ಸಂಬಂಧ ಈಗಾಗಲೇ ದೊಡ್ಡಪೇಟೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜೆಸಿ ನಗರದ ನದೀಮ್ (25) ಹಾಗೂ ಬುದ್ಧ ನಗರದ ಅಬ್ದುಲ್ ರೆಹಮಾನ್ (25) ನನ್ನು ಬಂಧಿಸಲಾಗಿದೆ. ಮತ್ತಿಬ್ಬರ ಬಂಧನಕ್ಕೆ ಪೊಲೀಸರಿಂದ ಕಾರ್ಯಾಚರಣೆ ಮುಂದುವರಿದಿದೆ.

ಇನ್ನು ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಜೊತೆಗೆ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಸೆಕ್ಷನ್ 144 ಹಿನ್ನೆಲೆ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಇಂದು ರಜೆ ಘೋಷಿಸಿದ್ದಾರೆ.