ಸಂಸ್ಕøತಿಯ ತೇರನ್ನು ಯಾವುದೇ ಒಬ್ಬ ವ್ಯಕ್ತಿಯಿಂದ ಎಳೆಯಲು ಸಾಧ್ಯವಿಲ್ಲ- ಟಿ.ತಿಮ್ಮೇಗೌಡ

253
FIRSTSUDDI

ಚಿಕ್ಕಮಗಳೂರು- ಸಂಸ್ಕøತಿಯ ತೇರನ್ನು ಯಾವುದೇ ಒಬ್ಬ ವ್ಯಕ್ತಿಯಿಂದ ಎಳೆಯಲು ಸಾಧ್ಯವಿಲ್ಲ, ಎಲ್ಲರೂ ಕೈಜೋಡಿಸಿದರೆ ಮಾತ್ರ ಅದು ಮುಂದಕ್ಕೆ ಹೋಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಶನಿವಾರ ನಡೆದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆಯ ಭರದಲ್ಲಿ ಕಣ್ಮರೆಯಾಗುತ್ತಿರುವ ನಮ್ಮ ಜಾನಪದ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ 1979 ರಲ್ಲಿ ಹೆಚ್.ಎಲ್.ನಾಗೇಗೌಡರು ಸ್ಥಾಪಿಸಿದ ಕರ್ನಾಟಕ ಜಾನಪದ ಪರಿಷತ್ ನಾಲ್ಕು ದಶಕಗಳನ್ನು ಕಂಡಿದೆ ಸಾಹಿತಿ ಪ್ರೊ|| ಚಂದ್ರಯ್ಯನಾಯ್ಡು ಮತ್ತು ಡಾ|| ಜೆ.ಪಿ.ಕೃಷ್ಣೇಗೌಡರ ಅವಧಿಯಲ್ಲಿ ಜಿಲ್ಲೆಯಲ್ಲಿ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದೆ ಎಂದರು.
ಇದೀಗ ಜಿಲ್ಲಾ ಘಟಕದ ಸಾರಥ್ಯವನ್ನು ಸಮರ್ಥ ವ್ಯಕ್ತಿಯೊಬ್ಬರು ವಹಿಸಿಕೊಂಡಿದ್ದಾರೆ ಆದರೆ ಅವರೊಬ್ಬರಿಂದ ಮಾತ್ರ ಜಾನಪದ ತೇರನ್ನು ಎಳೆಯಲು ಸಾಧ್ಯವಾಗುವುದಿಲ್ಲ ಎಂದ ಅವರು ಸಾಹಿತ್ಯ ಮತ್ತು ಸಂಸ್ಕøತಿ ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ ಹಾಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲೆಯ ಗಣ್ಯರು ಮತ್ತು ಸಾಹಿತಿಗಳು ಕರ್ನಾಟಕ ಜಾನಪದ ಪರಿಷತ್ತಿನೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ನಗರದಲ್ಲಿ ರಾಜ್ಯ ಮಟ್ಟದ ಜಾನಪದ ಸಾಹಿತ್ಯ ಮತ್ತು ಸಾಂಸ್ಕøತಿಕ ಸಮ್ಮೇಳನವನ್ನು ಆಯೋಜಿಸುವಂತೆ ಸಲಹೆ ಮಾಡಿದ ಅವರು ಅದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್ ಕುಮಾರ್ ಮಾತನಾಡಿ ರಾಜ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನೂತನ ಅಧ್ಯಕ್ಷ ಬಿ.ಜಿ.ಸುರೇಶ್ ಮಾತನಾಡಿ ಜಿಲ್ಲೆಯಲ್ಲಿ ಜಾನಪದ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ತಮಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಕಾರ್ಯಕ್ರಮದಲ್ಲಿ ಅಧಿಕಾರವನ್ನು ಹಸ್ತಾಂತರಿಸಲಾಯಿತು, ಸಮಾರಂಭದ ನೆನಪಿಗಾಗಿ ಹೊರತರಲಾದ ಜಾನಪದ ಭಾಷೆ ಮತ್ತು ಸಾಹಿತ್ಯ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.
ಸಾಹಿತಿ ಬೆಳವಾಡಿ ಮಂಜುನಾಥ್ ಆಶಯ ನುಡಿಗಳನ್ನಾಡಿದರು, ಐಡಿಎಸ್‍ಜಿ ಕಾಲೇಜಿನ ಪ್ರಾಧ್ಯಾಪಕ ಡಾ|| ಹೆಚ್.ಎಂ.ಮಹೇಶ್ ಉಪನ್ಯಾಸ ನೀಡಿದರು, ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು.
ಇತ್ತೀಚೆಗೆ ನಿಧನರಾದ ಸಾಹಿತಿ ಡಾ|| ಸುಮತೀಂದ್ರ ನಾಡಿಗ ಮತ್ತು ಕೊಡಗು ಹಾಗೂ ಕೇರಳದಲ್ಲಿ ಸಂಭವಿಸಿದ ಅತಿವೃಷ್ಠಿಯಲ್ಲಿ ನಿಧನರಾದವರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಕಾರ್ಯಕ್ರಮದ ನಡುವೆ ಭದ್ರಾವತಿಯ ವಾಚಸ್ಪತಿ ಕಲಾವೃಂದ ಮತ್ತು ನಗರದ ಸ್ವರಮಾಧುರ್ಯ ಸುಗಮ ಸಂಗೀತ ಸಂಘದ ಕಲಾವಿದರಿಂದ ನಡೆದ ಜಾನಪದ ಗೀತೆಗಳ ಗಾಯನ ಸಭಿಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ನಗರಸಭೆ ಸದಸ್ಯ ಎಂ.ಆರ್.ದೇವರಾಜ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿಯ ಅಧ್ಯಕ್ಷ ಹಿರಿಗಯ್ಯ, ಪಲ್ಲವಿ ಸಿ.ಟಿ.ರವಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ಅರುಣ ಕುಮಾರಿ, ಶ್ರೀದೇವಿ ಮೋಹನ್, ತಾಲ್ಲೂಕು ಘಟಕದ ಅಧ್ಯಕ್ಷರುಗಳಾದ ಎಂ.ವಿ.ಬಸವರಾಜ್, ವಿಜಯಕುಮಾರ್, ಹೆಚ್.ಎಸ್.ಜಗದೀಶ್, ಹೆಚ್.ಟಿ.ಸುಬ್ರಹ್ಮಣ್ಯ, ಕಾಂತರಾಜು,ಅಂಗುರ್ಡಿ ದಿನೇಶ್ ಉಪಸ್ಥಿತರಿದ್ದರು.
ವಾಸಂತಿ ಪದ್ಮನಾಭ್ ಕಾರ್ಯಕ್ರಮವನು ನಿರೂಪಿಸಿದರು, ಲಕ್ಷ್ಮಣಗೌಡ ಸ್ವಾಗತಿಸಿದರು, ಉಪನ್ಯಾಸಕ ವಿರೂಪಾಕ್ಷ ವಂದಿಸಿದರು.