ಸಚಿವ ಜಮೀರ್ ಅಹ್ಮದ್ ಗೆ ಕುಳ್ಳ ಎಂದು ಯಾವತ್ತೂ ಕರೆದಿಲ್ಲ: ಎಚ್.ಡಿ.ಕುಮಾರಸ್ವಾಮಿ.

28

ಮೈಸೂರು: ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮನ್ನು ‘ಕರಿಯಾ’ ಎಂದು ಕರೆದಿರುವ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು, ಕುಳ್ಳ ಎನ್ನುವ ಸಂಸ್ಕೃತಿ ನನ್ನದಲ್ಲ ಎಂದು ತಿರುಗೇಟು ನೀಡಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆಯುವ ಮೂಲಕ ಕಪ್ಪು ವರ್ಣದ ಜನಾಂಗೀಯ ನಿಂದನೆ ಮಾಡಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಜಮೀರ್ ಅಹ್ಮದ್ ಖಾನ್, ಪ್ರೀತಿಯಿಂದ ಅವರು ನನ್ನನ್ನು ‘ಕುಳ್ಳ’ ಎಂದು ಕರೆಯುತ್ತಿದ್ದರು. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತಿದ್ದೆ. ನನ್ನ ಹೇಳಿಕೆಯಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರು ಕುಳ್ಳ, ಕರಿಯ ಅನ್ನೋಕೆ, ನಾನು ಜಮೀರ್ ರೀತಿಯ ವಾತಾವರಣದಿಂದ ಬಂದಿಲ್ಲ. ಅವರ ಮಾತು ಅವರ ಸಂಸ್ಕೃತಿ ತೋರಿಸುತ್ತೆ. ಅವ್ರಿಗೆ ನಿಜಕ್ಕೂ ಮಾನ ಮರ್ಯಾದೆ ಇದಿಯಾ? ನಾವು ಈ ಹಿಂದೆ ಜೊತೆಯಾಗಿ ಇದ್ದಿದ್ದು ರಾಜಕೀಯವಾಗಿ ಮಾತ್ರ ಎಂದರು.