ಚಿಕ್ಕಮಗಳೂರು:- ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತು ಮತ್ತು ಸೌಲಭ್ಯಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರೋಟರಿ ಜಿಲ್ಲಾ ರಾಜ್ಯಪಾಲೆ ಬಿ ಸಿ ಗೀತ ಸಲಹೆ ಮಾಡಿದರು.
ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆ ಆವರಣದಲ್ಲಿ 1.75 ಲಕ್ಷರೂ ವೆಚ್ಚದಲ್ಲಿ ರೋಟರಿ ಕಾಫಿ ಲ್ಯಾಂಡ್ ನಿರ್ಮಿಸಿರುವ ರೋಟರಿ ಥೀಮ್ ಪಾರ್ಕ್ ನ್ನು ನಿನ್ನೆ ಸಾರ್ವಜನಿಕ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.
ಸೌಲಭ್ಯಗಳನ್ನು ಸವಲತ್ತುಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಂಡು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಸರ್ಕಾರ ಮತ್ತು ಸಂಘ ಸಂಸ್ಥೆಗಳ ಶ್ರಮ ಸಾರ್ಥಕವಾಗುತ್ತದೆ ಎಂದರು.
ಸ್ವಚ್ಛತೆ ಇದ್ದಲ್ಲಿ ಆರೋಗ್ಯವಿರುತ್ತದೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು ಹಾಗಾಗಿ ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಗೋಪಾಲಕೃಷ್ಣ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಮೀರಿ ಸಾಮಾಜಿಕ ಸೇವೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಅಭಿವೃದ್ಧಿಯನ್ನು ಸಾಧಿಸಬಹುದು ಎಂಬುದಕ್ಕೆ ಥೀಮ್ ಪಾರ್ಕಿನ ರೂವಾರಿ ಜಿಲ್ಲಾ ಸರ್ಜನ್ ಡಾ ಮೋಹನ್‍ಕುಮಾರ್ ಉದಾಹರಣೆಯಾಗಿದ್ದಾರೆ ಎಂದು ಹೇಳಿದರು.
ರೋಟರಿ ವಲಯ ಉಪರಾಜ್ಯಪಾಲ ಅನಂತೇಗೌಡ ಮಾತನಾಡಿ ರೋಟರಿಕಾಫಿ ಲ್ಯಾಂಡ್ ನ ಪದಾಧಿಕಾರಿಗಳು ಅತ್ಯುತ್ತಮವಾಗಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ರೊಟೇರಿಯನ್ ಗುರುಮೂರ್ತಿ ಮಾತನಾಡಿ ರೋಟರಿ ಸಂಸ್ಥೆ ಸಾರ್ವಜನಿಕರಿಂದ ಯಾವುದೇ ದೇಣೆಗೆಯನ್ನು ಪಡೆಯದೇ ಸ್ವಂತ ಹಣದಿಂದ ಸೇವಾ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ಜನ್ ಡಾ. ಮೋಹನ್‍ಕುಮಾರ್ ಮಾತನಾಡಿ ಆಸ್ಪತ್ರೆಗೆ ಥೀಮ್ ಪಾರ್ಕ್ ನಿರ್ಮಿಸಿಕೊಟ್ಟ ಹಿನ್ನೆಲೆಯಲ್ಲಿ ರೋಟರಿ ಕಾಫಿ ಲ್ಯಾಂಡ್ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ಪಿ ತನೋಜ್‍ಕುಮಾರ್ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ರೋಟರಿ ಕಾಫಿ ಲ್ಯಾಂಡ್ ನ ಪಲ್ಸ್ ಪೋಲಿಯೋ ಕಾರ್ಯಕ್ರಮ ಸ್ವಚ್ಛ ಭಾರತ್ ನೀರು ಸಂರಕ್ಷಿಸಿ ಕಾರ್ಯಕ್ರಮ ಅಂಗಾಂಗ ದಾನ ರೋಟರಿ ಚತುರ್ವಿಧ ಪರೀಕ್ಷೆ. ಎದೆ ಹಾಲಿನ ಮಹತ್ವ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಇದಕ್ಕೂ ಮುನ್ನ ರೋಟರಿಕಾಫಿ ಲ್ಯಾಂಡ್ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಗೆ ಸಿಮೆಂಟ್ ಬೆಂಚ್ ಮತ್ತು ಮೈಕ್ ಸೆಟ್ ವಿತರಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು, ಹೆರಿಗೆ ಆಸ್ಪತ್ರೆಯ ಆರ್‍ಎಂಓ ಡಾ. ಕಲ್ಪನಾಡಾ ಚಂದ್ರಶೇಖರ್, ನಾಸಿರ್ ಹುಸೇನ್, ರೋಟರಿಕಾಫಿ ಲ್ಯಾಂಡ್ ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿರಂಗರಾವ್, ಶಾಂತರಾಮ್ ಶೆಟ್ಟಿ ಉಪಸ್ಥಿತರಿದ್ದರು.