ಬೆಂಗಳೂರು : ರಾಜ್ಯ ಸಾರಿಗೆ ನೌಕರರ ವೇತನ ಶ್ರೇಣಿ ಶೇ.15ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2023ರ ಮಾರ್ಚ್ ತಿಂಗಳಿನಿಂದಲೇ ನೂತನ ವೇತನ ಜಾರಿ ಬರುವಂತೆ ಆದೇಶಿಸಲಾಗಿದೆ. ನಾಲ್ಕೂ ನಿಗಮಗಳ (ಕೆಎಸ್ಆರ್ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಕರ್ನಾಟಕ ಸಾರಿಗೆ) ಸಾರಿಗೆ ನೌಕರರಿಗೆ ವೇತನ ಹೆಚ್ಚಿಸಲಾಗಿದೆ.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಮಾ.21ರಿಂದ ಮುಷ್ಕರಕ್ಕೆ ಕರೆ ನೀಡಿದ್ದರು. ಮೂಲ ವೇತನದಲ್ಲಿ ಶೇ.25ರಷ್ಟು ಹೆಚ್ಚಳ ಮಾಡಬೇಕು ಎಂಬುದು ಸಾರಿಗೆ ನೌಕರರ ಬೇಡಿಕೆಯಾಗಿತ್ತು. ಸಾರಿಗೆ ಸಚಿವ ಶ್ರೀರಾಮುಲು ಅವರು ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಶೇ.8ರಿಂದ 10ರಷ್ಟು ವೇತನ ಏರಿಕೆ ಮಾಡುವ ಭರವಸೆ ನೀಡಿದ್ದರೂ ನೌಕರರು ಒಪ್ಪಿರಲಿಲ್ಲ.
ಕೊನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಶೇ 15ರಷ್ಟು ಹೆಚ್ಚಿಸುವುದಾಗಿ ಹೇಳಿ ಸಾರಿಗೆ ನೌಕರರ ಮನವೊಲಿಸಿದ್ದರು. ಇದೀಗ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.










