ಸಿಕಂದರಾಬಾದ್‌ನಲ್ಲಿ ಅಗ್ನಿ ಅವಘಡ : ಉಸಿರುಗಟ್ಟಿ 8 ಮಂದಿ ಸಾವು…

64
firstsuddi

ಹೈದರಾಬಾದ್ : ತೆಲಂಗಾಣದ ಸಿಕಂದರಾಬಾದ್ ನ ಶೋ ರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 8 ಮಂದಿ ಉಸಿರುಗಟ್ಟಿ ದುರ್ಮರಣಕ್ಕೀಡಾಗಿದ್ದಾರೆ. ಉಳಿದಂತೆ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ತಡರಾತ್ರಿ ಈ ಅಗ್ನಿ ಅವಘಡ ಸಂಭವಿಸಿದೆ. ಐದು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿರುವ ರೂಬಿ ಎಲೆಕ್ಟ್ರಿಕ್ ವಾಹನದ ಶೋರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ, ದಟ್ಟ ಹೊಗೆ ಹರಡಿದ್ದು, ಮೇಲ್ಮಹಡಿಯಲ್ಲಿರುವ ಲಾಡ್ಜ್ ನ ಕೊಠಡಿಯಲ್ಲಿ ಹೊಗೆ ವ್ಯಾಪಿಸಿದೆ. ಪರಿಣಾಮವಾಗಿ ಎಂಟು ಜನರಿಗೆ ಉಸಿರಾಡಲು ಸಮಸ್ಯೆ ಉಂಟಾಗಿ ಸಾವನ್ನಪ್ಪಿದ್ದಾರೆ. ಲಾಡ್ಜ್ ನ ವಿವಿಧ ಕೊಠಡಿ ಹಾಗೂ ಹೊರಗಡೆ ದಟ್ಟ ಹೊಗೆ ಸೇವಿಸಿರುವ ಕಾರಣ ಅನೇಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ಸಿಕಂದರಾಬಾದ್ ಅಗ್ನಿ ಅವಘಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ.