ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿ ಬೆಳ್ಳಂಬೆಳಗ್ಗೆ ಮತ್ತೊಂದು ವೀಡಿಯೋ ಬಿಡುಗಡೆ ಮಾಡಿದ್ದಾಳೆ. ಅಜ್ಞಾತ ಸ್ಥಳದಿಂದ ವಿಡಿಯೋದಲ್ಲಿ ಮಾತನಾಡಿರುವ ಯುವತಿ, ಮಾ.2 ರಂದು ಸಿಡಿ ರಿಲೀಸ್ ಆಗಿದೆ. ಆ ಸಿಡಿ ಯಾರು ರಿಲೀಸ್ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ನಾನು ನರೇಶಣ್ಣನಿಗೆ ಕರೆ ಮಾಡಿ ಸಿಡಿ ಬಗ್ಗೆ ಹೇಳಿದೆ. ಆಗ ನರೇಶಣ್ಣ ಈ ವಿಚಾರದಲ್ಲಿ ನಾನು ತುಂಬಾ ಸಣ್ಣವನು, ಇದಕ್ಕೆ ಪೊಲಿಟಿಕಲ್ ಸಪೋರ್ಟ್ ಬೇಕಾಗುತ್ತೆ, ಸಿದ್ದರಾಮಯ್ಯ, ಅಥವಾ ಡಿ.ಕೆ. ಶಿವಕುಮಾರ್ ಅವರ ಸಹಾಯ ಕೇಳೋಣ , ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೋಗೋಣ ಎಂದು ಹೇಳಿದ್ದರು, ಎಂದು ಯುವತಿ ಹೇಳಿದ್ದಾಳೆ.
ನಾನಿರುವ ಸ್ಥಳಕ್ಕೆ ನರೇಶ್ ಅಣ್ಣ ಬಂದು ನನ್ನನ್ನು ಡಿ.ಕೆ.ಶಿವಕುಮಾರ್ ಅವರ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದರು. ಆ ಸಮಯದಲ್ಲೇ ನನ್ನ ಮನೆಯವರು ಪದೇ ಪದೇ ಫೋನ್ ಮಾಡುತ್ತಿದ್ದರು. ಮನೆಯವರು ಅಳುವುದನ್ನು ಕೇಳಿ ನನಗೆ ಭಯವಾಯಿತು. ನಂತರ ಅವರನ್ನು ಸಮಾಧಾನ ಮಾಡಿದೆ. ನಾವು ಡಿ.ಕೆ.ಶಿವಕುಮಾರ್ ಅವರ ಮನೆ ಬಳಿ ಹೋಗಿದ್ದೆವು. ಆದರೆ ಅವರನ್ನು ಭೇಟಿ ಮಾಡಲು ಹೋದಾಗ ಅವರು ಸಿಗಲಿಲ್ಲ. ನನಗೆ ಯಾವುದೇ ತೊಂದರೆಯಾಗಿಲ್ಲ. ನಾನು ಸೇಫ್ ಆಗಿ ಇದ್ದೇನೆ. ಆದರೆ ನನ್ನ ಪೋಷಕರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾಳೆ.
ನಾನು ಏನೋ ಹೇಳ್ತೀನಿ, ಅದು ನನಗೆ ರಿವರ್ಸ್ ಆಗುತ್ತಿದೆ. 24 ದಿನಗಳಿಂದ ನನಗೆ ತುಂಬಾ ಟಾರ್ಚರ್ ಆಗುತ್ತಿದೆ.. ಏನು ಮಾಡಬೇಕು ಅಂತಾ ಗೊತ್ತಾಗ್ತಿಲ್ಲ. ರಮೇಶ್ ಜಾರಕಿಹೊಳಿ ಅವರು ಹೇಳ್ತಾರೆ, ನಾನು ಒಂದು ದಿನದಲ್ಲಿ ಸರ್ಕಾರ ಬೀಳಿಸ್ತೀನಿ ಅಂತ, ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ ಎಲ್ಲಾರನ್ನೂ ಜೈಲಿಗೆ ಕಳಿಸ್ತೀನಿ ಅಂತಿದ್ದಾರೆ. ಎಷ್ಟೇ ಹಣ ಖರ್ಚಾಗಲಿ ಅಂದ್ರೆ ಏನಿದರ ಅರ್ಥ ? ನಾಳೆ ಅವರು ನನ್ನ ಕುಟುಂಬವನ್ನು ಕೂಡ ಸಾಯಿಸ್ಬೋದು. ನನ್ನ ಮಾನ ಮರ್ಯಾದೆ ಹೋಗಿದೆ. ನಾನು ಸಂತ್ರಸ್ತೆ ಆಗಿರುವುದರಿಂದ ನನಗೆ ನ್ಯಾಯ ಕೊಡಿಸಿ ಎಂದು ವೀಡಿಯೋದಲ್ಲಿ ಯುವತಿ ಹೇಳಿಕೆ ನೀಡಿದ್ದಾಳೆ.










