ಸಿದ್ದರಾಮಯ್ಯನವರೇ ದೇವಸ್ಥಾನ ಉಳಿಸಿಕೊಳ್ಳಲು ಯಾವ ಪ್ರಯತ್ನವನ್ನೂ ನಿಮ್ಮ ಆಡಳಿತದಲ್ಲಿ ಮಾಡಲಿಲ್ಲ : ಪ್ರತಾಪ್ ಸಿಂಹ.

97
firstsuddi

ಮೈಸೂರು : ಬಿಜೆಪಿ ಸರ್ಕಾರ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ನೀವು ದೇವಸ್ಥಾನ ಉಳಿಸಿಕೊಳ್ಳಲು ಯಾವ ಪ್ರಯತ್ನವನ್ನೂ ನಿಮ್ಮ ಆಡಳಿತದಲ್ಲಿ ಮಾಡಲಿಲ್ಲ. ನಿಮಗೆ ದೇವಸ್ಥಾನ ಬಗ್ಗೆ ಪ್ರೀತಿ ಇದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯ ಆಡಳಿತದಲ್ಲಿ ಕೋರ್ಟ್ ಗೆ ವರದಿ ಕೊಡಬೇಕಿತ್ತು. 8 ವಾರದಲ್ಲಿ ವರದಿ ನೀಡಲು ಕೋರ್ಟ್ ಗಡುವು ನೀಡಿತ್ತು. 2018ರ ಫೆ. 6 ರಂದು ದೇವಸ್ಥಾನ ತೆರವು ವಿಚಾರದಲ್ಲಿ ಅಂತಿಮ ಆದೇಶ ಕೊಟ್ಟಿದೆ. ಈ ಆದೇಶವನ್ನು ನಿಮಗೂ ಐಎಎಸ್ ಅಧಿಕಾರಿಗಳು ಸರಿಯಾಗಿ ವಿವರಿಸಿಲ್ಲ. ಬಿಜೆಪಿ ಸರ್ಕಾರದಲ್ಲಿಯೂ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಆಡಳಿತಾತ್ಮಕ ವಿಚಾರದಲ್ಲಿ ಐಎಎಸ್ ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ವಿವರಣೆ ನೀಡುತ್ತಿಲ್ಲ. ರಾಜಕಾರಣಿಗಳು ತಮ್ಮ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದರು.

ಎರಡು ಸರ್ಕಾರದಿಂದಲೂ ತಪ್ಪಾಗಿದೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಗಮನಿಸಿ ಸರಿಪಡಿಸಬಹುದಿತ್ತು. ಅವರು ಕೂಡ ಆ ಕೆಲಸವನ್ನು ಮಾಡಲಿಲ್ಲ. ರಾಜಕೀಯ ಲಾಭಕ್ಕಾಗಿ, ವೋಟಿಗಾಗಿ ವೀರಶೈವ ಲಿಂಗಾಯತ ಜಾತಿ ಒಡೆಯುವ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.