ನವದೆಹಲಿ : ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಸುಪ್ರೀಂಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಕೇಂದ್ರಿಯ ತನಿಖಾ ದಳದಿಂದ(ಸಿಬಿಐ) ತಮ್ಮ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದೆಹಲಿ ಹೈಕೋರ್ಟ್ ಗೆ ಹೋಗುವಂತೆ ಸಿಸೋಡಿಯಾರಿಗೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ನರಸಿಂಹ ಅವರಿದ್ದ ದ್ವಿಸದಸ್ಯ ಪೀಠವು, ಈ ವಿಷಯದಲ್ಲಿ ನಾವು ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ದೆಹಲಿಯಲ್ಲಿ ನಡೆದ ಘಟನೆ ಎಂದಾಕ್ಷಣ ನೇರವಾಗಿ ಸುಪ್ರೀಂಕೋರ್ಟ್ ಗೆ ಬರುವ ಅಗತ್ಯವಿಲ್ಲ. ಮೊದಲು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿ, ನಂತರ ಅಲ್ಲಿನ ತೀರ್ಪಿನ ಆಧಾರದ ಮೇಲೆ ಸುಪ್ರೀಂಗೆ ಅರ್ಜಿ ಸಲ್ಲಿಸಿ ಎಂದು ನ್ಯಾಯಪೀಠ ಹೇಳಿದೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಜಾರಿಗೆ ತರಲು ಹೊರಟಿದ್ದ ಅಬಕಾರಿ ನೀತಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ನೀತಿಯನ್ನು ಸರ್ಕಾರ ಈಗಾಗಲೇ ರದ್ದು ಮಾಡಿದೆ. ಆದರೆ ಹಗರಣ ಕುರಿತಂತೆ ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ಮತ್ತು ಸಾಕ್ಷ್ಯಗಳ ನಾಶ ಹಾಗೂ ವಿರೂಪಗೊಳಿಸಿದ ಆರೋಪದ ಮೇಲೆ ಡಿಸಿಎಂ ಮನೀಶ್ ಸಿಸೋಡಿಯಾರನ್ನು ಸಿಬಿಐ ಬಂಧಿಸಿದೆ. ಎರಡೂ ತನಿಖಾ ಸಂಸ್ಥೆಗಳು ಈಗಾಗಲೇ ತಮ್ಮ ಪ್ರಾಥಮಿಕ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿವೆ.










