ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇಂದು ಮಧ್ಯಾಹ್ನ 1:20ರ ಸುಮಾರಿಗೆ ಭಯಾನಕ ಶಬ್ಧ ಕೇಳಿಸಿದ್ದು, ಶಬ್ಧ ಕೇಳಿ ಬೆಂಗಳೂರಿನ ಜನತೆ ಆತಂಕಕ್ಕೀಡಾಗಿದ್ದಾರೆ. ನಗರದ ಹಲವೆಡೆ ಈ ಭಯಾನಕ ಶಬ್ಧ ಕೇಳಿಸಿದ್ದು, ಬೊಮ್ಮಸಂದ್ರ, ಕೆ.ಆರ್. ಪುರಂ, ಇಂದಿರಾನಗರ, ಜಯನಗರ, ಜೆಪಿ ನಗರ, ಟಿನ್‍ಫ್ಯಾಕ್ಟರಿ, ಎಲೆಕ್ಟ್ರಾನಿಕ್ ಸಿಟಿ, ಬನಶಂಕರಿ, ಹೆಚ್‍ಎಎಲ್, ಇಸ್ರೋ ಲೇಔಟ್, ವಸಂತಪುರ ಸೇರಿದಂತೆ ನಗರದ ಹಲವೆಡೆ ಈ ಶಬ್ಧ ಕೇಳಿಸಿದೆ. ಶಬ್ಧ ಕೇಳಿಸುತ್ತಿದ್ದಂತೆ ಮನೆಯೊಳಗಿದ್ದ ಜನರು ಆತಂಕದಿಂದ ಮನೆ ಹೊರಗೆ ಓಡಿ ಬಂದಿದ್ದು, ಬಳಿಕ ಜನರು ವಿಪತ್ತು ನಿರ್ವಹಣಾ ಕೇಂದ್ರದ ಕಂಟ್ರೋಲ್ ರೂಂ ಗೆ ಕರೆ ಮಾಡಿ ತಿಳಿಸಿದ್ದಾರೆ. ಶಬ್ಧ ಎಲ್ಲಿಂದ ಬಂತು? ಏನು ಶಬ್ಧ ಎಂಬುವುದರ ಬಗ್ಗೆ ವಿಪತ್ತು ನಿರ್ವಹಣಾ ಕೇಂದ್ರ ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭೂಕಂಪನ ಆಗಿರಬಹುದಾ ಎಂಬುವುದರ ಬಗ್ಗೆ ಸ್ಪಷ್ಟನೆ ನೀಡಿದ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು, ಬೆಂಗಳೂರಿನಲ್ಲಿ ಯಾವುದೇ ರೀತಿಯ ಭೂಕಂಪನದ ಅನಿಭವ ಆಗಿಲ್ಲ. ಭೂಕಂಪನದ ಕುರಿತು ರಿಕ್ಟರ್ ಮಾಪಕದಲ್ಲಿ ಯಾವುದೇ ರೀತಿಯ ಪ್ರಮಾಣ ದಾಖಲಾಗಿಲ್ಲ. ನಮಗೆ ಹಲವು ದೂರವಾಣಿ ಕರೆಗಳು ಬರುತ್ತಿವೆ. ಆದರೆ ಏನಾಗಿದೆ ಎಂಬುವುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.