ಸುಪ್ರೀಂಕೋರ್ಟ್‌ನ ಮೊದಲ ನ್ಯಾಯಾಧೀಶೆ ಎಂ. ಫಾತಿಮಾ ಬೀವಿ ವಿಧಿವಶ…

43
firstsuddi

ತಿರುವನಂತಪುರಂ: ಸುಪ್ರೀಂಕೋರ್ಟ್‌ನ ಮೊದಲ ನ್ಯಾಯಾಧೀಶೆ ಹಾಗೂ ತಮಿಳುನಾಡಿನ ಮಾಜಿ ರಾಜ್ಯಪಾಲರಾದ ಜಸ್ಟೀಸ್ ಎಂ. ಫಾತಿಮಾ ಬೀವಿ ಅವರು ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಇಂದು ಬೆಳಗ್ಗೆ ಕೇರಳ ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಫಾತಿಮಾ ಬೀವಿ ಕೊನೆಯುಸಿರೆಳೆದಿದ್ದಾರೆ. ಪತ್ತನಂತಿಟ್ಟದಲ್ಲಿ ಅಣ್ಣಾವೀಟ್‌ನಲ್ಲಿ ಮೀರಾ ಸಾಹಿಬ್ ಮತ್ತು ಖದೀಜಾ ಬೀವಿಯವರ ಮಗಳಾಗಿ 1927 ರಲ್ಲಿ ಜನಿಸಿದ ಫಾತಿಮಾ ಬೀವಿ, ಪತ್ತನಂತಿಟ್ಟ ಕ್ಯಾಥೋಲಿಕ್ ಹೈಸ್ಕೂಲ್‌ನಲ್ಲಿ ಓದಿದ ನಂತರ ತಿರುವನಂತಪುರಂ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು.

ತಿರುವನಂತಪುರಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನೂ ಪಡೆದರು. 1950 ರಲ್ಲಿ, ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಇವರು, ಬಾರ್ ಕೌನ್ಸಿಲ್ ಚಿನ್ನದ ಪದಕವನ್ನು ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದರು. ಕೇರಳದಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಫಾತೀಮಾ ಬೀವಿ, 1974 ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದರು. 1980 ರಲ್ಲಿ ಅವರು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಸೇವೆ ಸಲ್ಲಿಸಿ 1983 ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

1989ರಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ಮೊದಲ ಮಹಿಳಾ ಜಡ್ಜ್ ಎನ್ನುವ ಶ್ರೇಯಕ್ಕೆ ಪಾತ್ರರಾದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ, ಅವರು ಉನ್ನತ ನ್ಯಾಯಾಂಗದಲ್ಲಿ ಮೊದಲ ಮುಸ್ಲಿಂ ಮಹಿಳೆ ಮತ್ತು ಏಷ್ಯಾದ ದೇಶದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದ ಮೊದಲ ಮಹಿಳೆ ಎನಿಸಿಕೊಂಡಿದ್ದರು. ಮೂರು ವರ್ಷಗಳ ನಂತರ ಅವರು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದರು. ನಿವೃತ್ತರಾದ ನಂತರ, ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಮತ್ತು ನಂತರ ತಮಿಳುನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.

ಸಾಮಾಜಿಕ ಮತ್ತು ನಾಗರಿಕ ಸೇವಾ ಕ್ಷೇತ್ರದಲ್ಲಿನ ಕೊಡುಗೆಗಾಗಿ ಈ ವರ್ಷ ಕೇರಳ ಸರ್ಕಾರವು ಫಾತಿಮಾ ಬೀವಿ ಅವರಿಗೆ ‘ಕೇರಳಪ್ರಭಾ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.