ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್‍ಗೆ ಚಾಕು ಇರಿದಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಇಂದು ಬಂಧನಕ್ಕೊಳಪಡುಸಿದ್ದಾರೆ. ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಬಾಂದ್ರಾ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆ ತಂದಿದ್ದು, ಅಲ್ಲಿ ತನಿಖೆ ನಡೆಸಲಾಗುತ್ತಿದೆ. ಸೈಫ್ ಮೇಲಿನ ಅಟ್ಯಾಕ್ ಬೆನ್ನಲ್ಲೇ ದಾಳಿಕೋರನ ಹುಡುಕಲು ಮುಂಬೈ ಪೊಲೀಸರು 20 ತಂಡ ರಚಿಸಿ ಬಲೆ ಬೀಸಿದ್ದರು. ಕೊನೆಗೂ ದಾಳಿಕೋರ ಪೊಲೀಸರ ವಶವಾಗಿದ್ದಾನೆ. ದಾಳಿ ಮಾಡಿದರ ಹಿಂದಿನ ಉದ್ದೇಶವೇನು, ಈ ದಾಳಿ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ ಎಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ನಸುಕಿನ 2.33 ಗಂಟೆ ಸುಮಾರಿಗೆ ದುಷ್ಕರ್ಮಿ ಅಪಾರ್ಟ್‍ಮೆಂಟ್‍ಗೆ ನುಗ್ಗಿದ್ದ ಆರೋಪಿ, ಸೈಫ್ ಅವರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ಸೈಫ್ ಅಲಿ ಖಾನ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬೆನ್ನಲ್ಲೇ ಆರೋಪಿ ಪತ್ತೆಗೆ ಮುಂಬೈ ಪೊಲೀಸರು ಭಾರೀ ಕಾರ್ಯಾಚರಣೆಗಿಳಿದಿದ್ದರು. ಆರೋಪಿಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಫೋಟೋವನ್ನು ಬಿಡುಗಡೆ ಮಾಡಿದ್ದರು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಬಂಧಿತನಾಗಿರುವ ಆರೋಪಿ ಈ ಹಿಂದೆ ಶಾರುಖ್ ಖಾನ್ ಮನೆ ಮುಂದೆ ಕೂಡ ಕಾಣಿಸಿಕೊಂಡಿರೋದು ಕೂಡ ಬೆಳಕಿಗೆ ಬಂದಿದೆ.