ಬೆಂಗಳೂರು: ಲೋಕಸಭೆ ಚುನಾವಣೆಯ ಮೊದಲನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಮತದಾರರ ಗಮನ ಸೆಳೆಯಲು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಕನ್ನಡ ಭಾಷೆಯಲ್ಲಿ ಪ್ರತ್ಯೇಕ ಖಾತೆ ತೆರೆದಿದ್ದಾರೆ.
‘ನಮೋ ಕನ್ನಡ’ ಎಂಬ ಹೆಸರಿನಲ್ಲಿ ನರೇಂದ್ರ ಮೋದಿ ಕನ್ನಡ ಖಾತೆ ಆರಂಭಿಸಲಾಗಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ಏಪ್ರಿಲ್ 26 ರಂದು ನಡೆಯಲಿದೆ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26 ರಂದು ನಡೆಯಲಿದ್ದು, ಮೇ 7ರಂದು ನಂತರದ ಹಂತದ ಮತದಾನ ನಡೆಯಲಿದೆ. ಹೀಗಾಗಿ ಕರ್ನಾಟಕದ ಎಲ್ಲ ಮತದಾರರನ್ನು ತಲುಪುವ ನಿಟ್ಟಿನಲ್ಲಿ ಮತ್ತು ಮೋದಿ ಭಾಷಣದ, ಅವರು ನೀಡುವ ಮಾಹಿತಿಯನ್ನು ಜನತೆಗೆ ತಲುಪಿಸುವ ಉದ್ದೇಶದೊಂದಿಗೆ ಈ ಎಕ್ಸ್ ಖಾತೆ ಆರಂಭಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮೋದಿ ತೆರೆದಿರುವ ಪ್ರತ್ಯೇಕ ಎಕ್ಸ್ ಖಾತೆಯಲ್ಲಿ ಮೋದಿ ಭಾಷಣದ ವೀಡಿಯೋ ತುಣುಕುಗಳನ್ನು ಪೋಸ್ಟ್ ಮಾಡಲಾಗಿದೆ. ಆದರೆ, ಈ ವೀಡಿಯೋಗಳಿಗೆ ಮೋದಿ ಭಾಷಣದ ಕನ್ನಡಾನುವಾದದ ಹಿನ್ನೆಲೆ ಧ್ವನಿ ನೀಡಲಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಒಂದು ಸುತ್ತಿನ ಚುನಾವಣಾ ಪ್ರಚಾರ ನಡೆಸಿರುವ ಮೋದಿ, ಮತ್ತೊಮ್ಮೆ ಏಪ್ರಿಲ್ 14ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಏಪ್ರಿಲ್ 14ರ ಭಾನುವಾರ ಮಂಗಳೂರಿನಲ್ಲಿ ರೋಡ್ ಶೋದಲ್ಲಿ ಭಾಗವಹಿಸಲಿದ್ದು, ನಂತರ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.










