ಹಿರಿಯ ನಟ ರಾಜೇಶ್ ನಿಧನ…

71
firstsuddi

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಅವರು ವಿಧಿವಶರಾಗಿದ್ದಾರೆ.

ಉಸಿರಾಟದ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಫೆ.9ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ʼಕಲಾತಪಸ್ವಿ ರಾಜೇಶ್’ ಎಂಬುದು ಅವರ ಆತ್ಮಚರಿತ್ರೆಯ ಹೆಸರು. ಸೊಸೆ ತಂದ ಸೌಭಾಗ್ಯ, ಕಲಿಯುಗ, ದೇವರ ಗುಡಿ, ವೀರ ಸಂಕಲ್ಪ, ಗಂಗೆ ಗೌರಿ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್ ಬಣ್ಣ ಹಚ್ಚಿದ್ದರು.

ರಾಜೇಶ್ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡುವುದಾಗಿ ನಟ, ರಾಜೇಶ್ ಅವರ ಅಳಿಯ ಅರ್ಜುನ್ ಸರ್ಜಾ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅರ್ಜುನ್ ಸರ್ಜಾ, ಕಳೆದ ಹತ್ತು ದಿನಗಳಿಂದ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಮೊದಲು ಕೋವಿಡ್ ನಂತರ ಸಿಕೆಡಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಗುರುವಾರವಷ್ಟೇ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರಿಂದ ಮನೆಗೆ ಕರೆತಂದಿದ್ದೆವು. ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದರು.

ಸದ್ಯ ಪಾರ್ಥೀವ ಶರೀರ ರಾಜೇಶ್ ಅವರ ಸ್ವನಿವಾಸ ವಿದ್ಯಾರಣ್ಯಪುರದಲ್ಲಿದ್ದು, ಕುಟುಂಬದ ಸದಸ್ಯರು ಪೂಜೆ ನಡೆಸಿದ ಬಳಿಕ 12 ಗಂಟೆಯ ಹೊತ್ತಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಏರ್ಪಾಡು ಮಾಡಲಾಗಿದೆ. ಮಧ್ಯಾಹ್ನ 3.30ಕ್ಕೆ ಮೇಡಿ ಅಗ್ರಹಾರ ಲಕ್ಷ್ಮೀಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.