ಹುಟ್ಟು ಹಬ್ಬದಂದು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು ಬಾಲಕಿ ಸಾವು…

46
firstsuddi

ಚಂಡೀಗಢ: ಹುಟ್ಟುಹಬ್ಬ ಆಚರಣೆಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಮೃತಪಟ್ಟ ಘಟನೆ ಪಂಜಾಬ್‌ನ ಪಟಿಯಾಲದಲ್ಲಿ ನಡೆದಿದೆ.

ಕಳೆದ ವಾರ ಪಂಜಾಬ್‌ನಲ್ಲಿ 10 ವರ್ಷದ ಬಾಲಕಿ ಮಾನ್ವಿ ಹುಟ್ಟುಹಬ್ಬದಂದು ಕೇಕ್ ಸೇವಿಸಿದ ಬಳಿಕ ಮೃತಪಟ್ಟಿದ್ದಳು. ಈಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮಾರ್ಚ್ 24 ರಂದು ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಲಾಗಿದ್ದು, ರಾತ್ರಿ 7 ಗಂಟೆ ಸುಮಾರಿಗೆ ಕೇಕ್ ಕತ್ತರಿಸಲಾಗಿದೆ, ಅದೇ ರಾತ್ರಿ 10 ಗಂಟೆಯ ವೇಳೆಗೆ ಇಡೀ ಕುಟುಂಬವು ಅಸ್ವಸ್ಥಗೊಂಡಿದೆ ಎಂದು ಮೃತ ಬಾಲಕಿಯ ಅಜ್ಜ ಹರ್ಬನ್ ಲಾಲ್ ಹೇಳಿದ್ದಾರೆ. ಇಬ್ಬರು ಸಹೋದರಿಯರು ಸ್ವಲ್ಪ ಸಮಯದ ನಂತರ ವಾಂತಿ ಮಾಡಲು ಆರಂಭಿಸಿದರು. ರಾತ್ರಿ ಮಾನ್ವಿ ನನಗೆ ಬಹಳ ಬಾಯಾರಿಕೆ ಆಗುತ್ತಿದೆ. ಬಾಯಿ ಒಣಗುತ್ತಿದೆ ಎಂದು ಹೇಳಿ ಅನೇಕ ಬಾರಿ ನೀರು ಕೇಳಿ ಮಲಗುತ್ತಿದ್ದಳು.

ಅಸ್ವಸ್ಥಗೊಂಡಿದ್ದ ಮಾನ್ವಿಯ ಆರೋಗ್ಯ ಮರುದಿನ ಬೆಳಗ್ಗೆ ಏರುಪೇರಾಯ್ತು. ಕೂಡಲೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೂಡಲೇ ಇಸಿಜಿ ಮಾಡಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾನ್ವಿ ಅಂದೇ ಮೃತಪಟ್ಟಳು. ಮಾನ್ವಿ ಸಾವಿಗೆ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಮಾನ್ವಿಯ ತಾಯಿ ಕಾಜಲ್ ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸರು ‘ಕನ್ಹಾ ಬೇಕರಿ’ ಅಂಗಡಿ ವಿರುದ್ಧ ಸೆಕ್ಷನ್ 304-ಎ (ನಿರ್ಲಕ್ಷ್ಯದಿಂದ ಸಾವು) ಮತ್ತು 273ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.