ಶ್ರೀನಗರ : ಹುತಾತ್ಮ ಯೋಧ ಔರಂಗಜೇಬ್ ಅವರ ಹತ್ಯೆಯ ಸೇಡು ತೀರಿಸಿಕೊಳ್ಳಲು ಅವರ ಇಬ್ಬರು ಸಹೋದರರು ಸೇನೆಗೆ ಸೇರಿದ್ದಾರೆ. ಔರಂಗಜೇಬ್ ಅವರು ಕಳೆದ ವರ್ಷ ಜೂನ್ 14ರಂದು ಈದ್ ಹಬ್ಬಕ್ಕೆಂದು ಮನೆಗೆ ತೆರಳುತ್ತಿದ್ದ ವೇಳೆ ಉಗ್ರರು ಸಂಚು ರೂಪಿಸಿ ಔರಂಗಜೇಬ್ ಅವರನ್ನು ಅಪಹರಣ ಮಾಡಿ ಹತ್ಯೆ ಮಾಡಿದ್ದರು. ಹೀಗಾಗಿ ಹುತಾತ್ಮ ಯೋಧರ ಸೇಡು ತೀರಿಸಿಕೊಳ್ಳಲು ಸಹೋದರರಾದ ಮೊಹಮ್ಮದ್ ತಾರೀಕ್ ಮತ್ತು ಮೊಹಮ್ಮದ್ ಶಬ್ಬೀರ್ ಅವರು ಸೇನೆಗೆ ಸೇರಿದ್ದು, ಬಳಿಕ ಮಾತನಾಡಿದ ಮೊಹಮ್ಮದ್ ಶಬ್ಬೀರ್ ಅವರು ನಾವು ನಮ್ಮ ದೇಶಕ್ಕಾಗಿ ಹಾಗೂ ನಮ್ಮ ಸಹೋದರನ ಹತ್ಯೆಯ ಸೇಡು ತೀರಿಸಿಕೊಳ್ಳಲು ಸೇನೆಗೆ ಸೇರಿದ್ದೇವೆ. ದಕ್ಷಿಣ ಕಾಶ್ಮೀರದಲ್ಲಿ ನಮ್ಮ ಸಹೋದರನನ್ನು ಹಿಜ್ಬಲ್ ಉಗ್ರರು ಅಪಹರಣ ಮಾಡಿ ಹತ್ಯೆ ಮಾಡಿದ್ದರು. ಹೀಗಾಗಿ ಸಹೋದರನ ಹತ್ಯೆಯ ಬಳಿಕ ನಾವು ಸೇನೆಗೆ ಸೇರಲು ನಿರ್ಧರಿಸಿದ್ದೆವು ಎಂದು ತಿಳಿಸಿದ್ದಾರೆ.










