ಹುಲಿ ಉಗುರು ಪೆಂಡೆಂಟ್: ದರ್ಶನ್, ಜಗ್ಗೇಶ್ ಹಾಗೂ ವಿನಯ್ ಗುರೂಜಿ ವಿರುದ್ಧ ದೂರು…

82
firstsuddi

ಹುಲಿ ಉಗುರಿನ ಪೆಂಡೆಂಟ್ ಹಾಕಿದ್ದರು ಎನ್ನುವ ಕಾರಣ್ಕಕಾಗಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಮೊನ್ನೆಯಷ್ಟೇ ಬಂಧನವಾಗಿದ್ದಾರೆ. ಅವರನ್ನು ಜೈಲಿಗೂ ಕಳುಹಿಸಿ ಆಗಿದೆ. ಸಂತೋಷ್ ಬಂಧನದ ಬೆನ್ನಲ್ಲೇ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳೂ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ದೇವಸ್ಥಾನವೊಂದರ ಸ್ಥಳದಲ್ಲಿ ನಿಂತು ತೆಗೆದಿರುವ ದರ್ಶನ್ ಅವರ ಫೋಟೋದಲ್ಲಿ ಅವರು ಹುಲಿ ಉಗುರು ಧರಿಸಿದ್ದಾರೆ. ಅಲ್ಲದೇ, ನಟ ಜಗ್ಗೇಶ್ ಸಂದರ್ಶನವೊಂದರಲ್ಲಿ ಸ್ವತಃ ಅವರೇ ಹುಲಿ ಉಗುರಿನ ಪೆಂಡೆಂಟ್ ತೋರಿಸುತ್ತಾ, ‘ಇದನ್ನು ನನ್ನ ತಾಯಿ ಕೊಟ್ಟಿದ್ದಾರೆ. ಮಗ ಹುಲಿಯಂತೆ ಇರಲಿ’ ಎನ್ನುವ ಮಾತುಗಳನ್ನು ಹೇಳಿದ್ದಾರೆ.

ಸ್ಯಾಂಡಲ್ ವುಡ್ ಸಿಲೆಬ್ರಿಟಿಗಳು ಅಲ್ಲದೇ, ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕೂತಿರುವ ಮತ್ತು ಅರ್ಚಕರೊಬ್ಬರು ಹುಲಿ ಉಗುರಿನ ಸರ ಹಾಕಿರುವ ಕುರಿತಾಗಿಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹೀಗಾಗಿ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಎಲ್ಲರಿಗೂ ನೋಟಿಸ್ ಕೊಡುವುದಾಗಿ ಉನ್ನತ ಮಟ್ಟದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಅರಣ್ಯಾ ಇಲಾಖೆಯ ಅಧಿಕಾರಿಗಳ ಕಚೇರಿಗೆ ಸಾಲು ಸಾಲು ದೂರುಗಳು ಬರುತ್ತಿವೆ. ಜನತಾ ಪಕ್ಷದ ನಾಗೇಶ್ ಅವರು ದರ್ಶನ್ ಅವರ ಮೇಲೆ ದೂರು ನೀಡಿದ್ದಾರೆ.

ನಟ ಜಗ್ಗೇಶ್​ ವಿರುದ್ಧ ಕಾಂಗ್ರೆಸ್​ನ ಮಾಜಿ ಎಂಎಲ್​ಸಿ ಪಿ.ಆರ್ ರಮೇಶ್, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ನೀಡಿದ್ದಾರೆ.

ಅವದೂತ ವಿನಯ್ ಗುರೂಜಿ ಅವರು ಹುಲಿ ಚರ್ಮವನ್ನು ಹೊಂದಿದ್ದು, ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಅರಣ್ಯ ಇಲಾಖೆ ಮುಖ್ಯ ಸಂರಕ್ಷಣಾಧಿಕಾರಿಗಳಿಗೆ ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯ ಸರ್ವಸಂಘಟನೆಗಳ ಒಕ್ಕೂಟದ ವತಿಯಿಂದ ದೂರು ನೀಡಲಾಗಿದೆ. ವನ್ಯ ಸಂರಕ್ಷಣಾ ಕಾಯ್ದೆ-1972 ಕಾಯ್ದೆಯಡಿಯಲ್ಲಿ ಕಾನೂನು ಉಲ್ಲಂಘನೆಯಾಗಿದ್ದು ಅವರ ವಿರುದ್ಧ ಸೂಕ್ತ ರೀತಿಯ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.