ಹೆಚ್.ಡಿ ಕುಮಾರಸ್ವಾಮಿ ಶತ್ರು ಸಂಹಾರ ಪೂಜೆ ಹೇಳಿಕೆಗೆ ಡಿ.ಕೆ ಶಿವಕುಮಾರ್ ತಿರುಗೇಟು.

41

ವೈಕುಂಠ ಏಕಾದಶಿಯ ಪ್ರಯುಕ್ತ ಮಲ್ಲೇಶ್ವರದ ವೆಂಕಟೇಶ್ವರ ದೇಗುಲದಲ್ಲಿ ದೇವರ ದರ್ಶನದ ನಂತರ ಶಿವಕುಮಾರ್ ಅವರು ಸುದ್ದಿಗಾರರಿಗೆ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ತಮಿಳುನಾಡಿನ ದೇವಸ್ಥಾನಗಳಲ್ಲಿ ಹೋಮ ಮಾಡಿಸಿರುವ ಕುರಿತು ಕೇಳಿದಾಗ, ದೇವರ ಮೇಲೆ ನಂಬಿಕೆಯಿಟ್ಟಿರುವ ವ್ಯಕ್ತಿ ನಾನು. ನನಗೆ ದೇವರು, ಧರ್ಮ ನಮ್ಮ ಆಚರಣೆಗಳ ಮೇಲೆ ನಂಬಿಕೆಯಿದೆ. ನಾನು ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೇ ಮನೆಯಿಂದ ಹೊರಗೆ ಬರುವುದಿಲ್ಲ. ನಾನು ಯಾವ ಶಕ್ತಿಯನ್ನು ನಂಬುತ್ತೇನೆಯೊ ಅದರ ಮೇಲೆ ಭಕ್ತಿ, ಪ್ರೀತಿ ಇದ್ದೇ ಇರುತ್ತದೆ. ಇದರಲ್ಲಿ ಯಾವುದೇ ವಿಶೇಷವಿಲ್ಲ ಎಂದು ತಿಳಿಸಿದರು. ಶತ್ರುಗಳ ನಾಶಕ್ಕೆ ಶಿವಕುಮಾರ್ ಹೋಮ ಮಾಡಿಸಿದ್ದಾರೆ ಎನ್ನುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಕೇಳಿದಾಗ, ನಾನು ಪ್ರತಿ ದಿನವೂ ನನಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡುತ್ತಿರುತ್ತೇನೆ. ನನಗೆ ಯಾರ್ಯಾರು ತೊಂದರೆ ಕೊಡುತ್ತಾರೆಯೋ ಅವರಿಂದ ನನಗೆ ರಕ್ಷಣೆ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿರುತ್ತೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದು ಹೇಳಿದರು. ಸುದ್ದಿಗಾರರು ಸಹ ನನಗೆ ಬೇಕಾದಷ್ಟು ತೊಂದರೆ ಕೊಡುತ್ತಿರುತ್ತೀರಿ. ಇಲ್ಲದೇ ಇರುವ ಹೊಸ ಸುದ್ದಿಗಳನ್ನು ಸೃಷ್ಟಿ ಮಾಡುತ್ತಾ ಇರುತ್ತೀರಿ. ಅದಕ್ಕಾಗಿ ನಿಮ್ಮಿಂದಲೂ ನಮಗೆ ರಕ್ಷಣೆ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿರುತ್ತೇನೆ ಎಂದು ತಿಳಿಸಿದರು.