ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಕುಮಾರಸ್ವಾಮಿ ಅವರು ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಹಳ ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಸಂಸಾರವೇ ಚುನಾವಣೆಯಲ್ಲಿ ಭಾಗವಹಿಸಿದೆ. ಇದರಿಂದಾಗಿ ಕುಮಾರಸ್ವಾಮಿ ಅವರು ಹತಾಶೆಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಆಗಲು ನಾವು ಬಿಡುವುದಿಲ್ಲ ಎಂದು ಹೆಚ್.ಡಿ. ದೇವೇಗೌಡ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು ಹೆಚ್.ಡಿ. ದೇವೇಗೌಡ ಅವರು ತಮ್ಮ ಬಾಹುಬಲದಿಂದ ಮೋದಿ ಪ್ರಧಾನಿಯಾಗುವುದನ್ನು ತಡೆಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ನಾನೂ ಕಣ್ಣೀರು ಹಾಕಬೇಕೆಂದು ಎಷ್ಟೂ ಪ್ರಯತ್ನ ಮಾಡಿದರೂ ನನಗೆ ಕಣ್ಣೀರು ಬರುವುದಿಲ್ಲ. ಆದರೆ ಕೆಲವರಿಗೆ ಅದೇಗೆ ಬೇಗ ಕಣ್ಣೀರು ಬರುತ್ತೋ ಗೊತ್ತಿಲ್ಲ. ಕಣ್ಣೀರಿನ ರಹಸ್ಯವೇನು ಎಂದು ಅವರ ಬಳಿಯೇ ಕೇಳಬೇಕು.
ಐಟಿ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು ಐಟಿ-ಇಡಿ ಅಧಿಕಾರಿಗಳು ಸುಮ್ಮನೆ ಬಂದು ದಾಳಿ ನಡೆಸುವುದಿಲ್ಲ. ಅವರೂ ಸಹ ಸಾಕಷ್ಟು ಮಾಹಿತಿಯನ್ನು ಸಂಗ್ರಹ ಮಾಡಿ ದಾಳಿ ನಡೆಸುತ್ತಿದ್ದಾರೆ. ದಾಳಿ ವೇಳೆ ಸಾಕಷ್ಟು ಹಣವನ್ನು ಕೂಡಾ ಸಂಗ್ರಹ ಮಾಡಿದ್ದಾರೆ. ಹೀಗಾಗಿ ಐಟಿ-ಇಡಿ ಅಧಿಕಾರಿಗಳಿಗೆ ಸುಮ್ಮನೆ ಕೆಲಸ ಮಾಡಲು ಬಿಡಿ ಎಂದು ಹೇಳಿದ್ದಾರೆ.










