ಹೆತ್ತ ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಮಾನಸಿಕ ಅಸ್ವಸ್ಥ ತಾಯಿ!

55
firstsuddi

ಮೈಸೂರು : ಮಾನಸಿಕ ಅಸ್ವಸ್ಥ ತಾಯಿಯೋರ್ವಳು ಹೆತ್ತ ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆಯೊಂದು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಬೂದುನೂರು ಗ್ರಾಮದಲ್ಲಿ ನಡೆದಿದೆ.

ಶ್ರೀನಿವಾಸ(4) ಮೃತ ಬಾಲಕ. ಬೂದುನೂರು ಗ್ರಾಮದ ಶಂಕರ್ ಯಡೆತೊರೆ ಗ್ರಾಮದ ಭವಾನಿಯನ್ನು ಮದುವೆಯಾಗಿದ್ದ. ಈಕೆ ತನ್ನ ಮೈಮೇಲೆ ದೇವರು ಬರುತ್ತದೆ ಎಂದು ಹೇಳುತ್ತಿದ್ದು, ಮಾನಸಿಕ ಅಸ್ವಸ್ಥವಾಗಿದ್ದಳು ಎಂದು ತಿಳಿದುಬಂದಿದೆ.

ಗಂಡನನ್ನ ಬಿಟ್ಟು ಮಗನೊಂದಿಗೆ ತವರು ಮನೆ ಸೇರಿದ್ದಳು. ಕಳೆದ 15 ದಿನಗಳ ಹಿಂದೆ ಪತಿಯೇ ಹೋಗಿ ಪತ್ನಿ ಮತ್ತು ಮಗನನ್ನ ಬೂದುನೂರಿಗೆ ಕರೆದುಕೊಂಡು ಬಂದಿದ್ದ. ಆದರೆ, ನಿನ್ನೆ ರಾತ್ರಿ ಶಂಕರ್ ಹೊರಗಡೆ ಹೋದಾಗ ಅಸ್ವಸ್ಥ ತಾಯಿ ತನ್ನ 4 ವರ್ಷದ ಮಗನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ.

ಮನೆಗೆ ಬಂದು ನೋಡಿದ ಶಂಕರ್ ಗಾಬರಿಯಾಗಿ ಗ್ರಾಮಸ್ಥರ ಸಹಾಯದಿಂದ ಹೆಚ್ ಡಿ ಕೋಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನ ಮೈಸೂರಿಗೆ ಕರೆದುಕೊಂಡು ಬಂದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಭವಾನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.