ಒಡಿಶಾ : ತೀವ್ರ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯನ್ನು ವೈದ್ಯರ ತಂಡ ಸುಮಾರು 30 ಕಿ.ಮೀ ಹೆಗಲ ಮೇಲೆ ಹೊತ್ತುಕೊಂಡು ನಡೆದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಒಡಿಶಾದ ಮಾಲ್ಕಂಗಿರಿ ಜಿಲ್ಲೆಯಲ್ಲಿ ನಡೆದಿದೆ. ನಕ್ಸಲ್ ಪೀಡಿತ ಪ್ರದೇಶವಾದ ಮಾಲ್ಕಂಗಿರಿ ಜಿಲ್ಲೆಯ ಕಡಿತುಲಗುಂತಿ ಗ್ರಾಮದಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮದ ಮೇಲ್ವಿಚಾರಣೆಗೆ ಡಾ. ರಾಧೇಶ್ವರ್ ಜೆನಾ ನೇತೃತ್ವದ ವೈದ್ಯರ ತಂಡ ಆಗಮಿಸಿದ್ದರು. ಈ ವೇಳೆ ಗರ್ಭಿಣಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಾಹಿತಿಯನ್ನು ತಿಳಿದು ಸ್ಥಳಕ್ಕೆ ಧಾವಿಸಿದ ಅವರು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಆದರೆ ಅವಳಿ ಮಕ್ಕಳಿದ್ದ ಕಾರಣ ಗರ್ಭಿಣಿಗೆ ತೀವ್ರ ಸ್ವರೂಪದ ರಕ್ತಸ್ರಾವವಾಗಿದ್ದರಿಂದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ಅನಿವಾರ್ಯತೆಯಿತ್ತು. ಈ ವೇಳೆ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಹಳ್ಳಿಗೆ ತಲುಪಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ವೈದ್ಯರು ಗರ್ಭಿಣಿಯನ್ನು ಸ್ಟ್ರೆಚರ್ನಲ್ಲಿ ಮಲಗಿಸಿ ಸುಮಾರು 30 ಕಿ.ಮೀ ದೂರ ಹೊತ್ತುಕೊಂಡು ನಡೆದು ಆಸ್ಪತ್ರೆಗೆ ದಾಖಲಿಸಿ ಬಳಿಕ ಮತ್ತೊಂದು ಮಗುವನ್ನು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.










