ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ
ಹೊಸಪೇಟೆ : ತಾಲೂಕಿನ ಮರಿಯಮ್ಮನಹಳ್ಳಿಯ 4ನೇ ವಾರ್ಡಿನಲ್ಲಿರುವ ಏರ್‍ಟೆಲ್‍ನ MRMNL1-IN-1047246 ಗುರುತಿನ ಟವರ್‍ನಿಂದಾಗಿ ವಾರ್ಡಿನ ನಾಗರಿಕರು ಬೇಸತ್ತಿದ್ದು, ಟವರ್‍ನ ಜನರೇಟರ್‍ನ ತೀವ್ರವಾದ ಶಬ್ದ ಹಾಗೂ ವೈಬ್ರೇಷನ್‍ನಿಂದಾಗಿ ಜನರ ನೆಮ್ಮದಿಯೇ ಹಾಳಾಗಿದೆ.
ಟವರ್‍ನ ನಿರ್ಮಿಸಿದ ಸ್ಥಳದ ಸುತ್ತಮುತ್ತ ಚಿಕ್ಕ ಚಿಕ್ಕ ಮಕ್ಕಳೂ ಸೇರಿದಂತೆ ವಯೋವೃದ್ಧರು ವಾಸವಿದ್ದಾರೆ. ಟವರ್ ಜನರೇಟರ್‍ನಿಂದ ಹೊಮ್ಮುವ ತೀವ್ರವಾದ ಶಬ್ದ ಹಾಗೂ ವೈಬ್ರೇಷನ್‍ನಿಂದಾಗಿ ಅಕ್ಕಪಕ್ಕದಲ್ಲಿ ವಾಸಿಸುವ ಜನರಿಗೆ ಮಾನಸಿಕ ಕಿರಿಕಿರಿಯುಂಟಾಗಿದೆ. ತಕ್ಷಣವೇ ಪ.ಪಂ. ಅಧಿಕಾರಿಗಳು ಈ ಟವರ್‍ನ್ನು ತೆರವುಗೊಳಿಸಬೇಕೆಂದು ದೂರು ನೀಡಿದ್ದಾರೆ. ಈ ಹಿಂದೆ ಈ ಕುರಿತಾಗಿ ಹಲವು ಬಾರಿ ದೂರು ನೀಡಿದರೂ ಕೂಡ ಪ.ಪಂ. ಅಧಿಕಾರಿಗಳು ಇತ್ತಕಡೆ ಬಂದು ಸ್ಥಳಿಯರ ನೋವು ಕೇಳುತ್ತಿಲ್ಲ ಎಂದು ವಾರ್ಡಿನ ನಾಗರಿಕರು ಪಟ್ಟಣ ಪಂಚಾಯಿತಿಯ ಕಾರ್ಯವೈಖರಿಯ ಕುರಿತು ಆರೋಪಿಸಿದ್ದಾರೆ.
ಶನಿವಾರ ಟವರ್‍ನ ತೊಂದರೆಯ ಕುರಿತು ಮರಿಯಮ್ಮನಹಳ್ಳಿಯ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ ಎಂದು 4ನೇ ವಾರ್ಡಿನ ನಿವಾಸಿ ಹಾಗೂ ಮರಿಯಮ್ಮನಹಳ್ಳಿ ಫಿರ್ಕಾ ಫೋಟೊಗ್ರಾಫರ್ ಹಾಗೂ ವೀಡಿಯೋಗ್ರಾಫರ್ ಅಸೋಶಿಯೇಷನ್‍ನ ಅಧ್ಕಕ್ಷ ಜಿ.ವಿರೂಪಾಕ್ಷಿ ಪತ್ರಿಕೆಗೆ ತಿಳಿಸಿದ್ದಾರೆ.
ಜನರೇಟರ್ ಬಳಸದಂತೆ ತಾಕೀತು: ಏರ್‍ಟೆಲ್ ಟವರ್‍ನ ಜನರೇಟರ್ ಕಿರಿಕಿರಿಯಿಂದಾಗಿ ಬೇಸತ್ತ ವಾರ್ಡಿನ ಮಹಿಳೆಯರು ಜನರೇಟರ್‍ಗೆ ಕಲ್ಲು ಎಸೆದು ಪ್ರತಿಭಟಿಸಿದರು. ಅಲ್ಲದೇ ಈ ವೇಳೆ ಟವರ್‍ನ ಸ್ಥಳಕ್ಕೆ ಆಗಮಿಸಿದ್ದ ಇಂಡಸ್ ಟವರ್ ಫೀಲ್ಡ್ ಇಂಜಿನಿಯರ್ ಸುಧೀರ್ ಹಾಗೂ ಆಪರೇಟರ್ ಬಾರಿಕರ ಸೋಮು ಅವರೊಂದಿಗೆ ಸಾರ್ವಜನಿಕರು ಜಗಳಕ್ಕಿಳಿದು ಜನರೇಟರ್ ಬಳಸದಂತೆ ತಾಕೀತು ಮಾಡಿದರು. ಇದಕ್ಕೆ ಉತ್ತರಿಸಿದ ಫೀಲ್ಡ್ ಇಂಜಿನಿಯರ್ ಸುಧೀರ್ ಸದ್ಯಕ್ಕೆ ಜನರೇಟರ್ ಬಳಸುವುದಿಲ್ಲ ಎಂದು ಸ್ಥಳೀಯರಿಗೆ ತಿಳಿಸಿದ್ದಾರೆ.
ಮರಿಯಮ್ಮನಹಳ್ಳಿ ಪಟ್ಟಣ ಪಿ.ಎಸ್.ಐ. ಶಿವಕುಮಾರ್‍ರು ಟವರ್‍ಗೆ ಸಂಬಂಧಿಸಿದವರನ್ನು ಠಾಣೆಗೆ ಕರೆಸಿ ಸ್ಥಳೀಯರ ನೆಮ್ಮದಿಯಾಗಿ ಜೀವನ ನಡೆಸಲು ಜನರೇಟರ್ ಬಳಸದಂತೆ ಟವರ್ ನಿರ್ವಹಣೆ ಮಾಡಿ, ಅಲ್ಲದೇ ಟವರ್‍ನ ಒಪ್ಪಂದ ಮುಗಿದ ಕೂಡಲೇ ಮರು ಒಪ್ಪಂದ ಮಾಡಿಕೊಳ್ಳದಂತೆ ನಿವೇಶನ ಮಾಲೀಕರಿಗ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.










