ಚಂಡೀಗಢ : ದೇಶದಾದ್ಯಂತ ಸಾವಿನ ಭೀತಿಯನ್ನು ಹೆಚ್ಚಿಸಿರುವ ಕೋವಿಡ್ ಇದೀಗ ಮೂರನೇ ಅಲೆಯ ಆತಂಕ ಸೃಷ್ಟಿಸಿದೆ. ಇದರ ಜೊತೆಗೆ ಕಣ್ಣೀರಿನಿಂದಲೂ ಕೊರೊನಾ ಹರಡುತ್ತೆ ಎಂಬ ಅಚ್ಚರಿ ಮಾಹಿತಿ ತಿಳಿದುಬಂದಿದೆ.
ಪಂಜಾಬ್ ನ ಅಮೃತಸರದ ಸರ್ಕಾರಿ ವೈದ್ಯ ಕಾಲೇಜು ನಡೆಸಿದ ಅಧ್ಯಯನದಲ್ಲಿ ಈ ವರದಿ ಬೆಳಕಿಗೆ ಬಂದಿದೆ. ಯಾವುದೇ ಕೋವಿಡ್ ಲಕ್ಷಣಗಳಿಲ್ಲದ ರೋಗಿಗಳ ಕಣ್ಣೀರಿನ ಮೂಲಕವೂ ಬೇರೆಯವರಿಗೆ ಕೊರೊನಾ ಹರಡಬಲ್ಲದು ಎಂಬ ಮಾಹಿತಿಯನ್ನು ಬಯಲು ಮಾಡಿದೆ. ದೇಹದ ಯಾವುದಾದರೂ ಭಾಗದಲ್ಲಿ ಕಾಯಿಲೆ ಕಾಣಿಸಿಕೊಂಡರೆ, ಕಣ್ಣಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಅಕ್ಯೂಲರ್ ಮ್ಯಾನಿಫೆಸ್ಟೇಷನ್ ಎಂದು ಕರೆಯಲಾಗುತ್ತದೆ. ಈ ಅಧ್ಯಯನಕ್ಕೆ ಒಟ್ಟು 120 ರೋಗಿಗಳನ್ನು ಒಳಪಡಿಸಲಾಗಿತ್ತು. ಈ ವೇಳೆ 60 ಮಂದಿಯಲ್ಲಿ ಅಕ್ಯೂಲರ್ ಮ್ಯಾಮಿಫೆಸ್ಟೇಷನ್ ಕಂಡು ಬಂದರೆ, 41 ರೋಗಿಗಳಲ್ಲಿ ಕಣ್ಣು ಕೆಂಪಾಗುವುದು ಕಂಡು ಬಂದಿದೆ. ಒಟ್ಟಾರೆ ಕಣ್ಣೀರಿನಿಂದಲೂ ಕೊರೊನಾ ಹರಡುತ್ತದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.










