ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟ- ಗೃಹಿಣಿ ಸಜೀವ ದಹನ…

37
firstsuddi

ಧಾರವಾಡ: ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ಓರ್ವ ಮಹಿಳೆಯೊಬ್ಬರು ಸಜೀವದಹನವಾಗಿದ್ದು, ಮೂವರು ಗಾಯಗೊಂಡಿರುವಂತಹ ಘಟನೆ ತಾಲೂಕಿನ ಕಲ್ಲೆ ಗ್ರಾಮದಲ್ಲಿ ನಡೆದಿದೆ.

ಮಹಾದೇವಿ ಒಗೆನ್ನವರ(28)ಮೃತ ಮಹಿಳೆಯಾಗಿದ್ದು, ಸುರೇಶ ಒಗೆನ್ನವರ, ಶ್ರೀಧರ ಒಗೆನ್ನವರ, ಚಿನ್ನಪ್ಪ ಒಗೆನ್ನವರ ಹಾಗೂ ಗಂಗವ್ವ ಒಗೆನ್ನವರ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಬೆಳಗಿನ ಜಾವ ಮನೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಸಿಲಿಂಡರ್ ಸೋರಿಕೆಯಾಗಿ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಏಕಾಏಕಿ ಸ್ಪಾರ್ಕ್ ಆಗಿ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ಮನೆ ತುಂಬ ಬೆಂಕಿ ಆವರಿಸಿ ಅನಾಹುತ ಸಂಭವಿಸಿದೆ.

ಅಡುಗೆ ಮನೆಯಲ್ಲೇ ಇದ್ದ ಮಹಿಳೆ ಮಹಾದೇವಿ ಹೊರಗಡೆ ಬರಲಾಗದೇ ಅಲ್ಲೇ ಸಿಲುಕಿ ಸಾವನ್ನಪ್ಪಿದ್ದಾರೆ. ಇದರಿಂದ ಮಹಾದೇವಿ ದೇಹ ಸಂಪೂರ್ಣ ಬೆಂದು ಹೋಗಿದೆ. ಉಳಿದವರು, ಹೇಗೋ ಮಾಡಿ ಹೊರ ಬಂದಿದ್ದಾರೆ. ಅವರಿಗೂ ಗಾಯಗಳಾಗಿವೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಹಾಗೂ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.