ಸಿದ್ದರಾಮಯ್ಯ ಅವರೇ ನಿಮಗೆ ತಾಕತ್ತಿದ್ದರೆ, ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಒಮ್ಮೆ ಹೇಳಿ ನೋಡೋಣ: ಆರ್.ಅಶೋಕ್.

50
firstsuddi

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವೀಕ್ ಪಿಎಂ ಎಂದು ಟೀಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮಗೆ ತಾಕತ್ತಿದ್ದರೆ, ನೀವು ಹೇಳಿಕೊಳ್ಳುವಂತೆ ತಾವು ಸ್ಟ್ರಾಂಗ್ ಮುಖ್ಯಮಂತ್ರಿಯೇ ಆಗಿದ್ದರೆ, ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಒಮ್ಮೆ ಹೇಳಿ ನೋಡೋಣ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಟ್ವೇಟ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯನವರೇ, ಕರ್ನಾಟಕ ಕಂಡ ಅತ್ಯಂತ ದುರ್ಬಲ, ಅಸಹಾಯಕ ಮುಖ್ಯಮಂತ್ರಿ ಎಂದಿದ್ದಾರೆ.

ಬಿ ಕೆ ಹರಿಪ್ರಸಾದ್ ಅವರು ತಮ್ಮ ಮೇಲೆ ಪದೇ ಪದೇ ವಾಗ್ದಾಳಿ ನಡೆಸಿದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗದಷ್ಟು, ಕನಿಷ್ಠ ಪಕ್ಷ ಪ್ರತ್ಯುತ್ತರ ಕೂಡ ನೀಡಲಾಗದಷ್ಟು ಅಸಹಾಯಕರು ತಾವು. ಡಿಸಿಎಂ ಡಿ ಕೆ ಶಿವಕುಮಾರ್ ಅವರ ಬಣ ಅವಕಾಶ ಸಿಕ್ಕಾಗಲೆಲ್ಲ ಬಂಡಾಯದ ಬಾವುಟ ಹಾರಿಸಿ ತಮ್ಮ ಕುರ್ಚಿಯ ಎಕ್ಸ್​​ಪೆರಿ ಡೇಟ್ ಮುಗಿಯುತ್ತದೆ ಎಂದು ಕಾಲೆಳೆಯುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ನಿಮ್ಮದು ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಅವರೇ ಮತ್ತೊಮ್ಮೆ ಮುಂದಿನ ಐದು ವರ್ಷ ಈ ದೇಶದ ಸ್ಟ್ರಾಂಗ್ ಪ್ರಧಾನಿ ಆಗಿ ಮುಂದುವರೆಯುತ್ತಾರೆ ಎಂದು ವಿಶ್ವಾಸದಿಂದ ಹೇಳುವ ಧೈರ್ಯ ನನಗಿದೆ. ನಿಮಗೆ ತಾಕತ್ತಿದ್ದರೆ, ನೀವು ಹೇಳಿಕೊಳ್ಳುವಂತೆ ತಾವು ಸ್ಟ್ರಾಂಗ್ ಮುಖ್ಯಮಂತ್ರಿಯೇ ಆಗಿದ್ದರೆ, ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಒಮ್ಮೆ ಹೇಳಿ ನೋಡೋಣ. ನಿಮಗೆ ಖಂಡಿತ ಹೇಳಲು ಆಗಲ್ಲ. ಅದಕ್ಕೆ ತಮ್ಮನ್ನು ಈ ರಾಜ್ಯ ಕಂಡ ಅತ್ಯಂತ ವೀಕ್ ಮುಖ್ಯಮಂತ್ರಿ ಎಂದು ಜನ ಮಾತಾಡಿಕೊಳ್ಳುವುದು ಎಂದು ಲೇವಡಿ ಮಾಡಿದ್ದಾರೆ.