ನವದೆಹಲಿ : ಅದಾನಿ ಗ್ರೂಪ್ ಆಫ್ ಕಂಪನಿಗಳ ವಿರುದ್ಧ ಬಿಡುಗಡೆ ಮಾಡಲಾಗಿದ್ದ ಹಿಂಡೆನ್‌ಬರ್ಗ್ ವರದಿಯ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಇಂದು ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರೆ ನೇತೃತ್ವದ ಸಮಿತಿಯನ್ನು ರಚಿಸಿದೆ.
ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ನೇತೃತ್ವದ ಸಮಿತಿಯು ಹಿರಿಯ ಬ್ಯಾಂಕರ್ ಗಳಾದ ಕೆವಿ ಕಾಮತ್ ಮತ್ತು ಒಪಿ ಭಟ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಒಪಿ ಭಟ್ ಮತ್ತು ನಿವೃತ್ತ ನ್ಯಾಯಮೂರ್ತಿ ಜೆಪಿ ದೇವಧರ್ ಅವರನ್ನು ಒಳಗೊಂಡಿರಲಿದೆ ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠ ತಿಳಿಸಿದೆ.
ತನಿಖೆಯನ್ನು ನಡೆಸಿ ಎರಡು ತಿಂಗಳೊಳಗೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ಗೆ ವರದಿ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ. ಸಮಿತಿಯು ಹೂಡಿಕೆದಾರರ ಜಾಗೃತಿಯನ್ನು ಬಲಪಡಿಸುವ ಕ್ರಮಗಳನ್ನು ಸೂಚಿಸುತ್ತದೆ ಮತ್ತು ಅದಾನಿ ಗ್ರೂಪ್ ಅಥವಾ ಇತರ ಕಂಪನಿಗಳಿಗೆ ಸಂಬಂಧಿಸಿದಂತೆ ಸೆಕ್ಯುರಿಟೀಸ್ ಮಾರುಕಟ್ಟೆಗಳಿಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆಯಲ್ಲಿ ನಿಯಂತ್ರಕದ ವೈಫಲ್ಯವಿದೆಯೇ ಎಂಬ ಬಗ್ಗೆ ತನಿಖೆ ಮಾಡುತ್ತದೆ ಎಂದು ಹೇಳಿದೆ.
ಹಿಂಡೆನ್‌ಬರ್ಗ್ ವರದಿ ತನಿಖೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಗೌತಮ್ ಅದಾನಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಇದು ಕಾಲಮಿತಿಯಲ್ಲಿ ಎಲ್ಲವನ್ನು ಅಂತ್ಯಗೊಳಿಸಲಿದೆ. ಸತ್ಯಕ್ಕೆ ಜಯ ಸಿಗಲಿದೆ ಎಂದು ಹೇಳಿದ್ದಾರೆ.










